ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕ ವಿತರಣೆ : ೧೨ ಶಿಕ್ಷಕರಿಗೆ ಸನ್ಮಾನ

ದೇವದುರ್ಗ.ಸೆ.೦೭- ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ಮಲದಕಲ್ ಗೆಳೆಯರ ಬಳಗದಿಂದ ಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳ ವಿತರಣೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೆ.೮ರಂದು ಆಯೋಜಿಸಲಾಗಿದೆ ಎಂದು ಉಪನ್ಯಾಸಕ ಕೆ.ವಿನೋದ ನಾಯಕ ಹೇಳಿದರು.
ತಾಲೂಕಿನ ಯುವಜನತೆಗೆ ಗೆಳೆಯರ ಬಳಗ ಹಾಗೂ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಿಂದ ನಿತ್ಯ ಒಂದು ಕಾಲಿಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ೧೫ದಿನ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ಸಮಾರೋಪ ಅಂಗವಾಗಿ ಮೂರು ದಿನ ಕಾರ್ಯಾಗಾರ ಆಯೋಜಿಸಿ ವಿಷಯ ತಜ್ಞರಿಂದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ವಿಷಯ ಒಳಗೊಂಡ ಸ್ಪರ್ಧಾತ್ಮಕ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿದ ೧೨ಜನ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿ ಗೌರವಿಸಲಾಗುವುದು.
ಜಿಪಂ ಸಿಇಒ ಶಶಿಧರ್ ಕುರೇರ್ ಕಾರ್ಯಕ್ರಮ ಉದ್ಘಾಟಿಸುವರು. ವಿವಿಧ ಇಲಾಖೆ ಅಧಿಕಾರಿಗಳು, ಉಪನ್ಯಾಸಕರು, ವಿಷಯ ತಜ್ಞರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಉಪನ್ಯಾಸಕ ನಾಗರಾಜ ಪೂಜಾರಿ, ನರಸಣ್ಣ, ಮೌನೇಶ ನಾಯಕ, ಗಂಗಾಧರ್ ಸ್ವಾಮಿ ಇದ್ದರು.