
ಸಂಜೆವಾಣಿ ವಾರ್ತೆ
ಬಳ್ಳಾರಿ,ಮೇ.22- ಕಲೆ, ಸಂಗೀತ, ಸಾಹಿತ್ಯ, ಶೌರ್ಯ, ಸಾಹಸ, ಸಂಸ್ಕೃತಯೊಂದಿಗೆ ಸನಾತನ ಧರ್ಮವನ್ನು ಕಾಪಿಟ್ಟುಕೊಂಡು ಈ ನಾಡು ಕಟ್ಟುವಲ್ಲಿ ಶ್ರಮಿಸಿರುವ ಹಂಡೆ ಹನುಮಪ್ಪ ನಾಯಕನ ಇತಿಹಾಸವನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಮೂಲಕ ಬೋಧಿಸಬೇಕಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿಎಚ್‍ಎಂ ಬಸವರಾಜ ತಿಳಿಸಿದರು.
ಇಲ್ಲಿನ ಗಾಂಧಿನಗರ ಬಾಲಭಾರತಿ ಶಾಲೆಯ ಆವರಣದಲ್ಲಿ ಪುನರುತ್ಥಾನದಿಂದ ಆಯೋಜಿಸಿದ್ದ ಬಳ್ಳಾರಿ ದೊರೆ ಹಂಡೆ ಹನುಮಪ್ಪ ನಾಯಕನ ಚರಿತ್ರೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 1946ರಲ್ಲಿ ಅನಂತಪುರ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿದ್ದ ಟಿಎಚ್‍ಎಂ ಸದಾಶಿವಯ್ಯನವರು ಕರ್ನಾಟಕದ ಗಡಿ ಗೆರೆಗಳು ಎನ್ನುವ ಕೃತಿ ರಚಿಸುವ ಮೂಲಕ ಹಂಡೆ ಹನುಮಪ್ಪ ನಾಯಕನ ಸಂಪೂರ್ಣ ಚರಿತ್ರೆಯನ್ನು ದಾಖಲಿಸಿದ್ದಾರೆ. ಹರಪನಹಳ್ಳಿಯ ಸೋಮಶೇಖರನಾಯಕ ಎನ್ನುವ ಪ್ರಾಂತೀಯ ಆಡಳಿತದ ಅರಸನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹಂಡೆ ಹನುಮಪ್ಪ ನಾಯಕ ಕೆಲವೊಂದು ದತ್ತಿಗಳನ್ನು ನೀಡಿದ್ದ. ಟಿಎಚ್‍ಎಂ ಪಕ್ಕಿರಯ್ಯ ಎನ್ನುವ ಮನೆತನಕ್ಕೆ ಗೌರವದಿಂದ ನಡೆದುಕೊಂಡಿದ್ದ. ಈ ಕುರಿತು ದಾಖಲೆಗಳಿವೆ. ನಮ್ಮದು ಇದೀಗ 13ನೇ ತಲೆಮಾರು. ಟಿಎಚ್‍ಎಂ ಸದಾಶಿವಯ್ಯನವರು ಕವಿಗಳಾಗಿ, ಸಾಹಿತಿಗಳಾಗಿ, ಇತಿಹಾಸಕಾರರಾಗಿ, ಸಂಶೋಧಕರಾಗಿ ಪ್ರಚಲಿತದಲ್ಲಿದ್ದರು. ಈ ಕುರಿತಂತೆ ಕೊಟ್ಟೂರು ಸ್ವಾಮಿ ಮಠದಲ್ಲಿ ಟಿಎಚ್‍ಎಂ ಪರಿವಾರದ ಸಾಮಾಜಿಕ, ಧಾರ್ಮಿಕ ಹಾಗೂ ಐತಿಹಾಸಿಕ ದಾಖಲೆಗಳು ಇಂದಿಗೂ ಲಭಿಸುತ್ತವೆ ಎಂದರು.
ಧಾರವಾಡದ ಇತಿಹಾಸ ಸಂಶೋಧಕರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು, ಕಲಬುರ್ಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠೆದ ನಿರ್ದೇಶಕರಾದ ಪ್ರೊ.ಎಸ್.ಸಿ.ಪಾಟೀಲ್ ಅವರು ಮಾತನಾಡಿ, ಬಳ್ಳಾರಿ ಕೋಟೆಯನ್ನು ಮೊದಲು ನಿರ್ಮಾಣ ಮಾಡಿದ್ದು ಚಾಲುಕ್ಯರು. ಬಳಿಕ ವಿಜಯನಗರ ಆಳರಸರ ಕಾಲದಲ್ಲಿ ಕೋಟೆ ನಿರ್ಮಾಣ ಕಾರ್ಯ ಮುಂದುವರಿಯಿತು. ವಿಜಯನಗರ ಉತ್ತರಾರ್ಧದ ವೇಳೆಯಲ್ಲಿ ಹಂಡೆ ಹನುಮಪ್ಪ ನಾಯಕ ಜಲದುರ್ಗ, ಗಿರಿದುರ್ಗ ಮತ್ತು ಸ್ಥಳದುರ್ಗಗಳನ್ನು ನಿರ್ಮಿಸಿದ್ದ. ಈತನ ಪುತ್ರನೂ ಸೇರಿದಂತೆ ಒಟ್ಟು ನಾಲ್ಕು ಹಂತದಲ್ಲಿ ಕೋಟೆ ನಿರ್ಮಾಣ ಮಾಡಲಾಗಿದೆ. ದುರಂತವೆಂದರೆ ಬಳ್ಳಾರಿ ಕೋಟೆಯನ್ನು 350 ವರ್ಷಗಳ ಕಾಲ ಹಂಡೆ ಹನುಮಪ್ಪ ನಾಯಕ ಮನೆತನ ಆಳಿದೆ. ಇದಕ್ಕೆ ಸಾಕಷ್ಟು ಕೈಫಿಯತ್ತುಗಳು ಮತ್ತು ಗೆಝಿಟೇರ್ ಮೂಲಕ ಮಾಹಿತಿ ಲಭ್ಯವಾಗುತ್ತದೆ. ಟಿಪ್ಪು ಸುಲ್ತಾನ ನಿರ್ಮಿಸಿದ ಕೋಟೆ ಎಂದು ನಾಮ ಫಲಕ ಹಾಕಲಾಗಿದೆ. ಇದು ಶುದ್ಧ ಸುಳ್ಳು. ಈ ನಾಮಫಲಕ ಬದಲಾಯಿಸಿ ಹಂಡೆ ಹನುಮಪ್ಪ ನಾಯಕ ನಿರ್ಮಿಸಿದ ಕೋಟೆ ಎಂದು ನಾಮಕರಣ ಮಾಡಬೇಕು. ಟಿಪ್ಪು ಕಟ್ಟಿದ ಕೋಟೆ ಎಂದು ಬಿಂಬಿಸುತ್ತಿರುವುದು ಬೇಸರದ ಸಂಗತಿ ಎಂದರು.
ವಿಜಯಪುರದ ಆಲಿ ಆದಿಲ್ ಶಾಹಿ ಇವರನ್ನು ತುಂಬಾ ಗೌರವಿಸುತ್ತಿದ್ದ. ಒಂದು ಬಾರಿ ತನ್ನ ಐದು ಸ್ಫುರದ್ರೂಪಿ ಮಕ್ಕಳೊಂದಿಗೆ ಆಲಿ ಆದಿಲ್ ಶಾಹಿ ಬಳಿ ತೆರಳಿದ್ದಾಗ ಐದು ಮಕ್ಕಳಲ್ಲಿ ಒಬ್ಬನನ್ನು ನನಗೆ ಕೊಡು ಎಂದು ಕೇಳಿದ್ದನಂತೆ. ಇದಕ್ಕೊಪ್ಪದ ಹಂಡೆ ಹನುಮಪ್ಪ ನಾಯಕ ಮರ್ಮಾಘಾತವಾಗುವಂತಯಹ ಉತ್ತರ ನಿಡಿದ್ದನಂತೆ. ವಿಜಯನಗರ ಅರಸರಂತೆ ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದ ಹಂಡೆ ಹನುಮಪ್ಪ ನಾಯಕ ದತ್ತಿ ದಾನ, ಮಠಗಳ ರಕ್ಷಣೆ ಮಾಡಿದ್ದ. ವಿಜಯನಗರ ಆಳರಸರ ಮಾದರಿಯಲ್ಲೇ ಹಂಡೆ ಮನೆತನದ ಅರಸರು ಉತ್ತಮ ಆಡಳಿತ ನೀಡಿದ್ದರು. ಹಂಪಿ ಉತ್ಸವದಲ್ಲಿ ಪ್ರತಿವರ್ಷ ಪಾಲ್ಗೊಳ್ಳುತ್ತಿದ್ದರು. ಮೂಲತಃ ವಿಜಯಪುರದವರಾದ ಅವರು ಈ ಭಾಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ತಾಳಿಕೋಟೆ ಯುದ್ಧದಲ್ಲಿ ಇವರ ಭಾಗವಹಿಸುವಿಕೆ ಇಲ್ಲದೇ ಇರುವುದರಿಂದ ಅಳಿಯ ರಾಮರಾಯ ಸೋಲಬೇಕಾಯಿತು. ಅನಂತಪುರದ ನಿಡುಮಾಮಿಡಿ ಮಠದಲ್ಲಿ ಇವರ ಅಂತ್ಯಕಾಲದ ದಿನಗಳು ಜರುಗಿದ್ದು, ಹಂಡೆ ಹನುಮಪ್ಪ ನಾಯಕನ ಸಮಾಧಿ ಮಠದ ಆವರಣದಲ್ಲೇ ನಿರ್ಮಾಣಮಾಡಲಾಗಿದೆ ಎಂದು ಇತಿಹಾಸದ ಕುರಿತು ಬೆಳಕು ಚೆಲ್ಲಿದರು.
ವೇದಿಕೆಯ ಮೇಲೆ ಇತಿಹಾಸಕಾರ ಡಾ.ವೈ.ಹನುಮಂತರೆಡ್ಡಿ, ಕೃತಿಕಾರ ನೇತಿ ರಘುರಾಮ್, ಕೋಲಾಚಲಂ ಅನಂತ್ ಪ್ರಕಾಶ್ ಮತ್ತಿತರರು ಇದ್ದರು. ವಾಸುಕಿ ಪುಸ್ತಕಾಲಯ ಹಾಗೂ ಪುನರುತ್ಥಾನ ಅಧ್ಯಯನ ಕೇಂದ್ರದ ಸಂಸ್ಥಾಪಕ ಶ್ರೀನಾಥ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವಸುಧಾ ಧಾರವಾಡಕರ ಸ್ವಾಗತಿಸಿ, ನಿರೂಪಿಸಿದರು. ರೇಣುಕಾ ಪ್ರಾರ್ಥಿಸಿದರು.
One attachment • Scanned by Gmail