ವಿದ್ಯಾರ್ಥಿಗಳಿಗೆ ಸಂಖ್ಯಾ ಸಾಮರ್ಥ್ಯ ಆರಂಭದಲ್ಲೇ ಮೂಡಿಸಲು ಕರೆ

(ಸಂಜೆವಾಣಿ ವಾರ್ತೆ)ಬಳ್ಳಾರಿ, ಡಿ.20: ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯವನ್ನು ಮಕ್ಕಳಲ್ಲಿ ಆರಂಭದಿಂದಲೇ ಅರ್ಥಪೂರ್ಣವಾಗಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡಾಂಬೆಗೆ ನಮನ,ಮೌಲ್ಯಾಂಕನ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿ- 2020 FLN ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.ಮಕ್ಕಳು ಆರಂಭದಲ್ಲೇ ಅರ್ಥ ಪೂರ್ಣ ಓದು,ಸರಳ ಲೆಕ್ಕ ಹಾಗೂ ಕೌಶಲಗಳನ್ನು ಕಲಿಯುವುದರಿಂದ ಅವನು ಭವಿಷ್ಯದಲ್ಲಿ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಬದುಕುತ್ತಾನೆ.ಜೊತೆಗೆ ಹೋಲಿಕೆ, ವ್ಯತ್ಯಾಸ, ವಿಶ್ಲೇಷಣೆ ಹಾಗೂ ಅನ್ವೇಷಣೆ ಗುಣಗಳನ್ನು ಬೆಳಸಿಕೊಳ್ಳಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪುಷ್ಟಿ ನೀಡುತ್ತದೆ ಎಂದು ಹೇಳಿದರು.ಕಳೆದ ಎರಡು ದಿನಗಳ ಕಾಲ ನಾಲ್ಕನೇ ಮತ್ತು ಆರನೇ ತರಗತಿಯ  ಪ್ರತಿ ಮಕ್ಕಳ ಕಲಿಕೆಯನ್ನು ವೈಯಕ್ತಿಕವಾಗಿ ಮೌಲ್ಯಾಂಕನ ಮಾಡಿ,ಮಕ್ಕಳಿಗೆ ಹಾಗೂ ಬೋಧಿಸುವ ಶಿಕ್ಷಕರಿಗೆ ಸೂಕ್ತ ಸಲಹೆ ಸೂಚನೆ ನೀಡಿದ ಮೌಲ್ಯಮಾಪಕರಾದ ರಾಜೇಂದ್ರ ಪ್ರಸಾದ್ ಹಾಗೂ ಪುರುಷೋತ್ತಮರನ್ನು ಶಾಲಾವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ಪ್ರತಿಭಾವಂತ ಮಕ್ಕಳಾದ ಎಂಟನೇ ತರಗತಿ ಸುವರ್ಣ, ಏಳನೇ ತರಗತಿ ಸುಮಿತ್ರಾ ಹಾಗೂ ಆರನೇ ತರಗತಿ ಕೆ.ಗೌತಮಿಗೆ ಬಹುಮಾನ ವಿತರಿಸಲಾಯಿತು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಕನ್ನಡಾಂಬೆಗೆ ಪೂಜೆ ನೆರೆವೇಸರಿಸಿ,ಸನ್ಮಾನಿಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು ವಿದ್ಯಾರ್ಥಿ ಭವಿಷ್ಯ ಶಿಕ್ಷಕರ ಕೈಯಲ್ಲಿ ಇದೆ.ಆದ್ದರಿಂದ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕಲಿಸಬೇಕೆಂದು ಮನವಿ ಮಾಡಿದರು.ಶಿಕ್ಷಕರಾದ ವಿ.ಬಸವರಾಜ,ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಚನ್ನಮ್ಮ,ಸುಮತಿ,ಸುಧಾ, ವೈಶಾಲಿ,ಶ್ವೇತಾ, ಶಶಮ್ಮ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.