ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಅಗತ್ಯ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.10 : ವಿದ್ಯಾರ್ಥಿಗಳು ವ್ಯವಹಾರಿಕ ಜ್ಞಾನ, ಹಣಕಾಸು ಕೌಶಲ ಬೆಳೆಸಿಕೊಳ್ಳಬೇಕು ಎಂದು ಗದಗ ಎಚ್.ಸಿ.ಎಸ್. ಕಾಲೇಜಿನ ಉಪನ್ಯಾಸಕ ರವಿ ಹುಚ್ಚಣ್ಣನವರ ಕರೆ ನೀಡಿದರು.
ಪಟ್ಟಣದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಆಯೋಜಿಸಿದ್ದ ‘ಹಣಕಾಸು ಜಾಗೃತಿ ಮತ್ತು ಸ್ಟಾಕ್ ಮಾರ್ಕೆಟ್’ ಕುರಿತು ತರಬೇತಿಯಲ್ಲಿ ಉಪನ್ಯಾಸ ನೀಡಿದ ಅವರು, ಬೇರೆ ದೇಶಗಳಲ್ಲಿ ಜನರು ಸರ್ಕಾರಿ ನೌಕರಿಗೆ ಜೋತು ಬೀಳದೇ ಸ್ವಯಂ ಉದ್ಯೋಗದಲ್ಲಿ ತೊಡಗುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಿ ಉತ್ತಮ ಜೀವನ ನಡೆಸುತ್ತಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಈ ರೀತಿ ಬಂಡವಾಳ ಹೂಡಿಕೆ ಕುರಿತು ಮಾಹಿತಿ ಪಡೆದರೆ ಆರ್ಥಿಕ ಸ್ವಾವಲಂಬನೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ವಿಜಯಕುಮಾರ್ ಮಾತನಾಡಿ, ಗ್ರಾಮಾಂತರ ಮಕ್ಕಳು ಸಹ ಷೇರು ಮಾರುಕಟ್ಟೆಯಂತಹ ಹೂಡಿಕೆಗಳ ಕುರಿತು ಮಾಹಿತಿ ಪಡೆಯಲು ಈ ತರಹದ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ವಿಭಿನ್ನ ಆಲೋಚನೆಗಳ ಮೂಲಕ ಸ್ವಂತಿಕೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಪ್ರಥಮ ದರ್ಜೆ ಸಹಾಯಕ ಜಿ.ಕೊಟ್ರೇಶ, ಐಕ್ಯೂಎಸಿ ಸಂಯೋಜಕಿ ಉಮಾ ಸಿ.ಕೊಳ್ಳಿ, ಉಪನ್ಯಾಸಕರಾದ ಡಾ. ಏಟುಕುರಿ ದೊರೆಬಾಬು, ಹೆಚ್.ಬಸವರಾಜ, ಎಂ.ಬಾಬುಲಾಲ್ ಇತರರು ಉಪಸ್ಥಿತರಿದ್ದರು.