ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.30:- ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಕಾಲೇಜಿನವರೆಗೆ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ತಾಲೂಕಿನ ವಿವಿಧ ಹೋಬಳಿಗಳ ಗ್ರಾಮೀಣ ಸಾರಿಗೆ ಸಮಸ್ಯೆಗಳ ಬಗ್ಗೆ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಶಾಸಕರು ಅನಂತರ ಅಧಿಕಾರಿಗಳೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.
ತಾಲೂಕಿನ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ದೈನಂದಿನ ಕಲಿಕೆಗಾಗಿ ಪಟ್ಟಣದ ಕಾಲೇಜುಗಳಿಗೆ ಬರುತ್ತಾರೆ. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳು 2 ರಿಂದ 3 ಕಿ.ಮೀ ದೂರದಲ್ಲಿವೆ. ಪಟ್ಟಣದಲ್ಲಿ ನಗರ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಉರಿ ಬಿಸಿಲಿನಲ್ಲಿ ನಡೆದುಕೊಂಡು ಕಾಲೇಜಿಗೆ ಹೋಗಿ ಬರಬೇಕಾಗಿದೆ. ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಅಧಿಕಾರಿಗಳ ತಂಡದೊಂದಿಗೆ ಬಸ್ ಸಂಚಾರ ಮಾರ್ಗದ ಪರಿಶೀಲನೆ ನಡೆಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸಂಪರ್ಕಿಸುವ ರಸ್ತೆ ಕಿರಿದಾಗಿದ್ದು ಬಸ್ ಸಂಚಾರಕ್ಕೆ ಅಡಚಣೆಯಾಗುವುದರಿಂದ ಕಾಲೇಜಿನ ಸಮೀಪದಲ್ಲಿರುವ ನಳಂದ ಕಾನ್ವೆಂಟ್ ರಸ್ತೆಯ ಅಂತ್ಯದವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಯಿತು.
ಮಳೆ ಬಂದಾಗಲೆಲ್ಲಾ ಪಟ್ಟಣದ ಬಸ್ ನಿಲ್ದಾಣದೊಳಗೆ ನೀರು ತುಂಬಿ ಕೆರೆಯಂತಾಗುತ್ತದೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳ್ಳದಲ್ಲಿ ನೀರು ಸುಲಲಿತವಾಗಿ ಹರಿದು ಹೋಗಲು ಅಡಚಣೆಯಾಗುತ್ತಿರುವುದರಿಂದ ನಿಲ್ದಾಣದೊಳಗೆ ನೀರು ನುಗ್ಗುತ್ತಿದೆ. ಬಸ್ ನಿಲ್ದಾಣದ ದಕ್ಷಿಣ ತುದಿಯಲ್ಲಿರುವ ಮುಖ್ಯ ರಸ್ತೆಗೆ ಅಳವಡಿಸಿರುವ ಪೈಪುಗಳಲ್ಲಿ ನೀರು ಹರಿದು ಹೋಗುತ್ತಿಲ್ಲ. ಸಿಮೆಂಟ್ ಪೈಪುಗಳನ್ನು ತೆಗೆದು ರಾಜಕಾಲುವೆ ನಿರ್ಮಿಸಿದರೆ ಬಸ್ ನಿಲ್ದಾಣದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದು ಹೋಗುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ರೂಟ್ ಆಪರೇಟ್ ಮಾಡುವಂತೆ ಶಾಸಕ ಹೆಚ್.ಟಿ.ಮಂಜು ಸೂಚಿಸಿದರು.
ತಾಲೂಕಿನ ವಿವಿಧ ಹೋಬಳಿಗಳ ಸಾರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ ಶಾಸಕ ಹೆಚ್.ಟಿ.ಮಂಜು ಪ್ರಯಾಣಿಕರ ದಟ್ಟಣೆ ಆಧರಿಸಿ ಗ್ರಾಮೀಣ ಪ್ರದೇಶಗಳಿಗೆ ಹೊಸ ಹೊಸ ಬಸ್ ರೂಟ್ ಆರಂಭಿಸುವಂತೆ ಸೂಚಿಸಿದರು. ಹತ್ತಾರು ನೂತನ ಸಂಚಾರ ಮಾರ್ಗಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ವಿಭಾಗೀಯ ಅಧಿಕಾರಿ ಮಹದೇವ್, ಕೆ.ಆರ್.ಪೇಟೆ ಡಿಪೆÇೀ ವ್ಯವಸ್ಥಾಪಕ ಎ.ಡಿ.ಕುಮಾರ್, ಪಾರುಪತ್ತೆಗಾರ ಮಂಜುನಾಥ್, ಸಹಾಯಕ ಎಂಜಿನಿಯರ್ ಗಣೇಶ್ ಮತ್ತಿತರರಿದ್ದರು.