ವಿದ್ಯಾರ್ಥಿಗಳಿಗೆ ಲವ್ ಮಾಡಲು ಒಂದು ವಾರ ರಜೆ

ಬೀಜಿಂಗ್,ಏ.೨- ಚೀನಾದಲ್ಲಿ ಯುವಜನರ ಸಂಖ್ಯೆ ಕಡಿಮೆಗೊಳ್ಳುತ್ತಿದ್ದು, ಇದನ್ನು ಹೋಗಲಾಡಿಸಲು ಅಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲೆಂದೇ ಒಂದು ವಾರಗಳ ಕಾಲ ರಜೆಯನ್ನು ನೀಡಲಾಗಿದೆ.
ಈಗಾಗಲೇ ಚೀನಾದಲ್ಲಿ ಜನಸಂಖ್ಯೆಯು ಕಡಿಮೆಗೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ಆರ್ಥಿಕತೆಯ ಮೇಲೆ ಪ್ರಭಾವವನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ರೀತಿಯ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಇದೀಗ ಚೀನಾದ ೯ ಕಾಲೇಜಿಗಳಲ್ಲಿ ಏಪ್ರಿಲ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲು ಒಂದು ವಾರಗಳ ಕಾಲ ರಜೆ ನೀಡುವ ಯೋಜನೆಯನ್ನು ತಂದಿದೆ.
ವರದಿಗಳ ಪ್ರಕಾರ ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ೯ ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜ್, ಮಾ. ೨೧ ರಂದು ಈ ರೀತಿಯ ರಜೆಯನ್ನು ಘೋಷಿಸಿತ್ತು. ಅದಾದ ಬಳಿಕ ಏ.೧ ರಿಂದ ೭ ರವರೆಗೆ ವಿದ್ಯಾರ್ಥಿಗಳಿಗೆ ಪ್ರೀತಿಸಲು ಹಾಗೂ ಪ್ರೀತಿಯನ್ನು ಆನಂದಿಸಲು ಅದರ ಜೊತೆ ಜೊತೆಗೆ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸುವುದನ್ನು ಕಲಿಯಲು ಪ್ರೋತ್ಸಾಹಿಸುತ್ತಿದೆ.
ಈ ಬಗ್ಗೆ ಅಲ್ಲಿನ ಪ್ರಾಂಶುಪಾಲರು ಮಾತನಾಡಿ, ಇದರಿಂದಾಗಿ ವಿದ್ಯಾರ್ಥಿಗಳು ಹಸಿರಾದ ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದರು.