ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಒದಗಿಸುವುದರಿಂದ ಸಾಧನೆಗೈಯ್ಯಲು ಅನುಕೂಲವಾಗುತ್ತದೆ: ಡಾ. ಬಿಡವೆ

ಕಲಬುರಗಿ:ಡಿ.9: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೃತ್ತಿಜೀವನದಲ್ಲಿ ಬಹು ಕೌಶಲ್ಯಗಳನ್ನು ಒದಗಿಸುವುದರಿಂದ ಅವರು ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ಅನೇಕ ಅವಕಾಶಗಳನ್ನು ಸಾಧಿಸಲು ಅನುಕೂಲವಾಗುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರದಂದು, ಲಲಿತಕಲಾ ವಿಭಾಗ ಮತ್ತು ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಜಂಟಿಯಾಗಿ ಆಯೋಜಿಸಿದ್ದ ಚಿತ್ರಕಲೆ, ಛಾಯಾಗ್ರಹಣ, ಚಿತ್ರಕಲೆ ಮತ್ತು ವಿನ್ಯಾಸ-2023 ಎರಡು ದಿನಗಳ ಅಂತರಾಷ್ಟ್ರೀಯ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಡಾ. ಬಿಡವೆ, ಶರಣಬಸವ ವಿಶ್ವವಿದ್ಯಾಲಯವು ಕಳೆದ ಮೂರು ವರ್ಷಗಳಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಓಇP) ಬಹು ಕೌಶಲ್ಯಯುಕ್ತ ಶೈಕ್ಷಣಿಕ ಚಟುವಟಿಕೆಗಳನ್ನು ನೀಡುತ್ತಿದೆ, ಇದು ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆ ಮಾಡಿಕೊಂಡ ಕೋರ್ಸ್ ಹೊರತುಪಡಿಸಿ ಇತರ ವಿಷಯಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಉದ್ಯಮ ನಿರ್ವಹಣೆ, ಪ್ರವಾಸೋದ್ಯಮ, ಲಲಿತಕಲೆ, ಸಂಗೀತ ಸೇರಿದಂತೆ ಇತರ ವಿಷಯಗಳಿಂದ ಅವರು ಆಯ್ಕೆಯ ಮತ್ತೊಂದು ಹೊಸ ವಿಷಯವನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ವಿಷಯದ ಜ್ಞಾನವನ್ನು ಪಡೆಯಲು ಸಹಾಯವಾಗುತ್ತದೆ, ಇದು ಅವರ ವೃತ್ತಿಪರ ಜೀವನದಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಎನ್‍ಇಪಿಯಲ್ಲಿ ಅಳವಡಿಸಿಕೊಂಡಿರುವ ಈ ಹೊಸ ವಿಧಾನವು ವಿಶೇಷವಾಗಿ ಸಂಗೀತ ಅಥವಾ ಲಲಿತಕಲೆಗಳನ್ನು ತಮ್ಮ ಪದವಿಪೂರ್ವ ಹಾಗೂ ಸ್ನಾತಕೋತ್ತರ ಅಧ್ಯಯನಗಳಲ್ಲಿ ಚುನಾಯಿತ ವಿಷಯಗಳಲ್ಲಿ ಒಂದಾಗಿ ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸಂಕುಚಿತ ಮನೋಭಾವ ಮತ್ತು ಪ್ರಾದೇಶಿಕ ಪ್ರವೃತ್ತಿಗಳನ್ನು ಜಯಿಸಲು ಸಹಾಯವಾಗಿದೆ ಎಂದು ಡಾ ಬಿಡವೆ ಹೇಳಿದರು.
ಲಲಿತಕಲಾ ವಿಭಾಗದ ಡೀನ್ ಡಾ. ಶಾಂತಲಾ ನಿಷ್ಠಿ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು, ಸಂಗೀತ ಶಿಕ್ಷಣ ಹಾಗೂ ಲಲಿತಕಲೆ ಎರಡರಲ್ಲೂ ಸ್ನಾತಕೋತ್ತರ ಶಿಕ್ಷಣವನ್ನು ಸ್ಥಾಪಿಸಿರುವುದರಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮೊದಲನೆಯದು ಎಂದ ಅವರು, ಬೇರೆ ವಿಭಾಗಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಲಿತಕಲೆ ಮತ್ತು ಸಂಗೀತವನ್ನು ಚುನಾಯಿತ ವಿಷಯವಾಗಿ ಪರಿಚಯಿಸಿದ ಮೊದಲನೇಯ ವಿಶ್ವವಿದ್ಯಾಲಯವೆಂದರೆ ಅದು ಶರಣಬಸವ ವಿಶ್ವವಿದ್ಯಾಲಯ ಎಂದು ಅವರು ಹೇಳಿದರು.
ಲಲಿತಕಲಾ ವಿಭಾಗದ ಮುಖ್ಯಸ್ಥ ಹಾಗೂ ಚಿತ್ರಕಲಾ ಪ್ರದರ್ಶನದ ಸಂಚಾಲಕ ಡಾ.ಸುಬ್ಬಯ್ಯ ಎಂ.ನೀಲಾ ಮಾತನಾಡಿ, ಭಾರತದ ಸುಮಾರು 50 ಖ್ಯಾತ ಚಿತ್ರಕಲಾವಿದರೊಂದಿಗೆ ಹನ್ನೊಂದು ಮಂದಿ ವಿವಿಧ ಶೈಲಿಯ ಹಿರಿಯ ಚಿತ್ರಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.
ಕೆನಡಾ, ಟರ್ಕಿ, ಕೊಲಂಬಿಯಾ ಯುಎಸ್‍ಎ, ಜಪಾನ್, ಕ್ರೊಯೇಷಿಯಾ, ಬಾಂಗ್ಲಾದೇಶ, ಇರಾನ್, ನೇಪಾಳ, ರμÁ್ಯ ಮತ್ತು ಅಮೆರಿಕದ ಪ್ರತಿಷ್ಠಿತ ಚಿತ್ರಕಾರರು ಈ ಪ್ರದರ್ಶನದಲ್ಲಿ ಭಾಗವಹಿಸಿ ಅವರ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ವಸ್ತುಪ್ರದರ್ಶನದ ವೈಶಿಷ್ಟ್ಯವೆಂದರೆ ವಿವಿಧ ವರ್ಣಗಳ ವರ್ಣಚಿತ್ರಗಳು, ರೇಖಾಚಿತ್ರಗಳು, ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ಸೆರೆಹಿಡಿದ ಛಾಯಾಚಿತ್ರಗಳು, ಲಲಿತಕಲೆಗಳನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಹಾಗೂ ಉದಯೋನ್ಮುಖ ವರ್ಣಚಿತ್ರಕಾರರು ಪ್ರದರ್ಶನದ ಭಾಗವಾಗಿದ್ದಾರೆ.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕಲ್ಯಾಣರಾವ್ ಪಾಟೀಲ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗಬಸವಣ್ಣ ಗುರಗೋಳ, ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಅಧ್ಯಕ್ಷ ಡಾ.ರೆಹಮಾನ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.