ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಆಗತ್ಯ

ಗೌರಿಬಿದನೂರು, ನ.೩: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ವಿಷಯಗಳ ಜತೆಗೆ ಆಧುನಿಕ ತಂತ್ರಜ್ಞಾನವನ್ನು ಅರಿಯಲು ಸಹಕಾರಿಯಾಗಲು ಕಂಪ್ಯೂಟರ್ ಜ್ಞಾನ ಅತ್ಯವಶ್ಯಕವಾಗಿದ್ದು, ಇದನ್ನು ತಾಲ್ಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಕೆ.ಎಚ್.ಪಿ ಪೌಂಡೇಷನ್ ವತಿಯಿಂದ ಉಚಿತವಾಗಿ ನೀಡಲು ಬದ್ಧವಾಗಿದ್ದೇವೆ ಎಂದು ಪೌಂಡೇಷನ್ ನ ಅಧ್ಯಕ್ಷರಾದ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲ್ಲೂಕಿನ ಡಿ.ಪಾಳ್ಯದಲ್ಲಿ ಕೆ.ಎಚ್.ಪಿ ಪೌಂಡೇಷನ್ ವತಿಯಿಂದ ಪ್ರಾರಂಭವಾಗಿರುವ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಗಡಿಭಾಗದಲ್ಲಿ ಸಾಕಷ್ಟು ಬಡ ಕುಟುಂಬದಲ್ಲಿ ಪೋಷಕರು ಮಕ್ಕಳಿಗೆ ಕನಿಷ್ಟ ಮಟ್ಟದ ಶಿಕ್ಷಣವನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿನ ಬಡ ಕುಟುಂಬದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಲು ಸಿದ್ಧವಾಗಿದ್ದೇವೆ. ಈ ಹಿಂದೆ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ನೋಟ್ ಬುಕ್ ವಿತರಣೆಯ ಜತೆಗೆ ಸರ್ಕಾರಿ ಶಾಲೆಗಳಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆನ್ ಲೈನ್ ತರಗತಿಗಾಗಿ ಟ್ಯಾಬ್ ಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಸಾಮಾಜಿಕ ಕಾರ್ಯಗಳ ಜತೆಗೆ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿರುತ್ತೇವೆ. ಇದರಿಂದಾಗಿ ಅವರು ಉನ್ನತ ಶಿಕ್ಷಣಕ್ಕೆ ಬೆನ್ನೆಲುಬಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗುವ ಜತೆಗೆ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ನಿತಂತರವಾದ ಸೇವಾ ಕಾರ್ಯಗಳಿಂದ ಆತ್ಮತೃಪ್ತಿ ತಂದಿದೆ ಎಂದು ಹೇಳಿದರು.
ಇದೇ ವೇಳೆ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಪಿ.ವಿ.ರಾಘವೇಂದ್ರ ಹನುಮಾನ್ ಮಾತನಾಡಿ, ಕ್ಷೇತ್ರದಲ್ಲಿ ಪ್ರತೀ ವಿದ್ಯಾರ್ಥಿಗೂ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ಧೇಶದಿಂದ ಕೆ.ಎಚ್.ಪಿ ಪೌಂಡೇಷನ್ ವತಿಯಿಂದ ಹೋಬಳಿ ಮಟ್ಟದಲ್ಲಿ ಪ್ರತ್ಯೇಕವಾಗಿ ಕಂಪ್ಯೂಟರ್ ಕೇಂದ್ರಗಳನ್ನು ಆರಂಭಿಸಿ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಕಂಪ್ಯೂಟರ್ ಕಂಪ್ಯೂಟರ್ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಗೌಡರು ಆಸರೆಯಾಗಲಿದ್ದಾರೆ. ಅವರ ಈ ಸೇವಾ ಕಾರ್ಯದಿಂದ ಕ್ಷೇತ್ರದಲ್ಲಿನ ಸಾವಿರಾರು ಬಡ ವಿದ್ಯಾರ್ಥಿಗಳ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ಎಚ್.ವಿ.ಮಂಜುನಾಥ್, ಜೆ.ಕಾಂತರಾಜು, ಕೆ.ವಿ.ವೆಂಕಟರಾಮರೆಡ್ಡಿ, ಮಲ್ಲಸಂದ್ರ ಗಂಗಾಧರ್, ಲಕ್ಷ್ಮಣರಾವ್, ಬಸಪ್ಪರೆಡ್ಡಿ, ರಾಮಕೃಷ್ಣಾರೆಡ್ಡಿ, ಜಿ.ಕೆ.ಸತೀಶ್, ಶ್ರೀನಿವಾಸಗೌಡ, ಅಬ್ದುಲ್ಲಾ, ಮೌಲಾಜಾನ್, ಸುಧಾಕರ್, ಕೊಂಡಯ್ಯ, ಶ್ರೀಧರ್, ನಾಗಾರ್ಜುನ, ಡೆಲ್ಲಿ ಸಂದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.