ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ

ಬೀದರ್: ನ.18:ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಇರುವ ವಿ.ಕೆ. ಇಂಟರ್‍ನ್ಯಾಷನಲ್ ಪದವಿ ಕಾಲೇಜು ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಮಾಸ್ಕ್ ಉಚಿತವಾಗಿ ವಿತರಿಸಲಾಯಿತು.

ತರಗತಿಗಳು ಪ್ರಾರಂಭವಾದ ಪ್ರಯುಕ್ತ ಕಾಲೇಜಿಗೆ ಬಂದ ವಿದ್ಯಾರ್ಥಿಗಳ ಪೈಕಿ ಮಾಸ್ಕ್ ಇಲ್ಲದವರಿಗೆ ಸ್ಥಳದಲ್ಲೇ ಮಾಸ್ಕ್ ಒದಗಿಸಲಾಯಿತು.

ಕೊರೊನಾ ಸೋಂಕಿನ ಕಾರಣ ಸುದೀರ್ಘ ಅವಧಿ ಬಳಿಕ ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಸ್ವಾಗತಿಸಿ ಬರಮಾಡಿಕೊಂಡರು.

ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು, ಕೈಗೆ ಸ್ಯಾನಿಟೈಸರ್ ಹಾಕಿ ವಿದ್ಯಾರ್ಥಿಗಳನ್ನು ವರ್ಗ ಕೋಣೆಗೆ ಬಿಡಲಾಯಿತು.

ಮೂರು ಅಡಿ ಅಂತರದಲ್ಲಿ ಹಾಕಿದ್ದ ಬೇಂಚ್‍ಗಳ ಮೇಲೆ ತಲಾ ಒಬ್ಬರಿಗೆ ಮಾತ್ರ ಕೂಡಲು ಅವಕಾಶ ಕಲ್ಪಿಸಿ ಸುರಕ್ಷಿತ ಅಂತರ ಕಾಪಾಡಲಾಯಿತು.

ಕೊರೊನಾ ಸೋಂಕಿನ ಕಾರಣ ಫೆಬ್ರುವರಿಯಿಂದ ಶಾಲಾ, ಕಾಲೇಜುಗಳು ನಡೆದಿಲ್ಲ. ಉನ್ನತ ಶಿಕ್ಷಣ ಇಲಾಖೆ ಆದೇಶದ ಅನ್ವಯ ಇದೀಗ ಪದವಿ ಕಾಲೇಜು ತರಗತಿಗಳನ್ನು ಆರಂಭಿಸಲಾಗಿದೆ ಎಂದು ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಪ್ರಾಚಾರ್ಯ ಡಾ. ದಿಲೀಪ್ ಕಮಠಾಣೆ ತಿಳಿಸಿದರು.

ಕೊರೊನಾ ಸೋಂಕು ತಡೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸುರಕ್ಷಿತ ಅಂತರ ಕಾಪಾಡುವುದು ಸೇರಿದಂತೆ ಕಾಲೇಜಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸಲಾಗುವುದು ಎಂದು ಹೇಳಿದರು.

ತರಗತಿಗಳು ಶುರುವಾದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿತ್ತು.

ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಉಪ ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್‍ನ್ಯಾಷನಲ್ ಪದವಿ ಕಾಲೇಜು ಪ್ರಾಚಾರ್ಯೆ ಶಿವಲೀಲಾ ಟೊಣ್ಣೆ, ಆಡಳಿತಾಧಿಕಾರಿ ಜಿನ್ಸ್ ಕೆ. ಥಾಮಸ್, ಉಪನ್ಯಾಸಕರಾದ ರವೀಂದ್ರ ದೇವಾ, ನಾಗೇಶ ಬಿರಾದಾರ, ಪ್ರದೀಪ ಗಾಜುಲ್, ಝರಣಪ್ಪ ಹೊಸಳ್ಳಿ ಇದ್ದರು.

ಇದಕ್ಕೂ ಮುನ್ನ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಅವರು ತರಗತಿ ಪ್ರಾರಂಭದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಮಾಡಿಕೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿದರು. ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಸರ್ಕಾರದ ಆದೇಶದಂತೆ ಪಾಲಕರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.