ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.16: ಅಫಜಲಪೂರ ಟಕ್ಕೆಯ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಪಿ.ಎ.ಹಿಟ್ನಳ್ಳಿ ಹಾಗೂ ಪ್ರಾಂಶುಪಾಲ ಸಿದ್ದರಾಮ ಎಂಟಯತು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಶನಿವಾರ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಡಾ.ಪಿ.ಎ.ಹಿಟ್ನಳ್ಳಿ ಅವರು ಕ್ಷಯರೋಗದ ಕುರಿತು ಮಾಹಿತಿ ನೀಡಿ, ಕ್ಷಯರೋಗ ಮೈಕ್ರೋ ಬ್ಯಾಕ್ಟಿರಿಯಾದಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಷಯ ರೋಗ ಸಾಮಾನ್ಯ ಲಕ್ಷಣಗಳು ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು, ಜ್ವರ, ವಿಶೇಷವಾಗಿ ರಾತ್ರಿ ವೇಳೆ ಜ್ವರ ಬರುವುದು ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಇದರ ಲಕ್ಷಣಗಳಾಗಿದ್ದು, ಸೂಕ್ತ ಚಿಕಿತ್ಸೆಯ ಮೂಲಕ ಕ್ಷಯರೋಗ ಗುಣಪಡಿಸಬಹುದಾಗಿದೆ ಎಂದು ಹೇಳಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಬಾಗವಾನ್ ಅವರು ಮಾತನಾಡಿ, ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಆರೋಗ್ಯ ಸಮಸ್ಯೆಗಳು ಪೌಷ್ಠಿಕಾಂಶದ ಕೊರತೆಯಿಂದ ಬರುವ ರೋಗಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಅಸಾಂಕ್ರಾಮಿಕ ರೋಗಗಳ ಹಾಗೂ ರೋಗಗಳ ಪರಿಹಾರ ಕುರಿತು ಮಾತನಾಡಿದರು.
ತಾಲೂಕಾ ವಿಸ್ತರಣಾಧಿಕಾರಿ ಎಸ್.ಎ.ಜಮಾದಾರ ಅವರು ಮಾತನಾಡಿ, ಪರಿಸರ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಕ್ರಿಮಿನಾಶಕ ಸಿಂಪರÀಣೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ-ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿ ಡಾ.ಮಂಜುನಾಥ ಪೋಳ, ಡಾ.ಮಲ್ಲಿಕಾರ್ಜುನ ಗಂಗನಹಳ್ಳಿ, ಡಾ.ಸೋನಾಲಿ ಸೋನಾವಣೆ, ಡಾ.ಅಮೃತಾ ಗೊಟ್ಯಾಳ, ಡಾ.ಈರಣ್ಣ ತುಪ್ಪದ, ಡಾ.ಜಯಶ್ರೀ ನಾಯಕ, ರಮೇಶ ಅರಕೇರಿ, ರಾಜು ಬೋರಗಿ, ಮುತ್ತು ಬಿರಾದಾರ ಹಾಗೂ ವಸತಿ ನಿಲಯದ ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.