ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆ ತರಬೇತಿ ಶಿಬಿರ ಸಮಾರೋಪ.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ.28. ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆ ಪ್ರಯುಕ್ತದ ಉಚಿತ ತರಬೇತಿ ಶಿಬಿರ ನಿನ್ನೆ ಸಮಾರೋಪಗೊಂಡಿತು. ಉಚಿತ ಶಿಬಿರದಲ್ಲಿ 1ನೇ  ತರಗತಿಯಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳ ಕುರಿತು ಬೋಧಿಸಲಾಯಿತು. ವಿಶೇಷವಾಗಿ 5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಮತ್ತು ಸರ್ಕಾರಿ  ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ತರಬೇತಿಯನ್ನು ನೀಡಲಾಯಿತು. ಶಿಕ್ಷಕ ಈರಣ್ಣ. ಎಚ್  ಮತ್ತು ಶಿಕ್ಷಕಿ ಗಂಗಮ್ಮ ತರಗತಿಗಳನ್ನು ನಡೆಸಿಕೊಟ್ಟರು. ಇದೆವೇಳೆ ಉಚಿತ ಶಿಬಿರಕ್ಕೆ ಶಾಲೆಯ ಕೊಠಡಿಯನ್ನು ವ್ಯವಸ್ಥೆ ಮಾಡಿಕೊಟ್ಟ ವಿವೇಕಾನಂದ ಪ್ರೌಢಶಾಲೆ  ಮುಖ್ಯ ಗುರುಗಳಾದ ಎನ್. ಪಂಪಾಪತಿ ಇವರನ್ನುಪರಿಷತ್ ನಿಂದ  ಸನ್ಮಾನಿಸಲಾಯಿತು. ಶಿಬಿರ ಆಯೋಜಕ ದಲಿತ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಸಂಚಾಲಕ ಎಚ್. ಲಕ್ಷ್ಮಣ ಭಂಡಾರಿ ಮಾತನಾಡಿ ವಿದ್ಯಾರ್ಥಿ ಪರಿಷತ್ನಿಂದ ವಿಶೇಷವಾಗಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ರಾತ್ರಿ ಶಾಲೆಗಳನ್ನು ಆರಂಭಿಸಲಾಗಿದೆ. ಮತ್ತು ಬೇಸಿಗೆ ರಜೆಯನ್ನು  ವ್ಯವಸ್ಥಿತವಾಗಿ ವಿದ್ಯಾರ್ಥಿಗಳು ಓದಿಗಾಗಿ ಬಳಸಿಕೊಳ್ಳಲು ಈ ರೀತಿಯ ತರಬೇತಿ ತರಗತಿಗಳನ್ನು ಆಯೋಜಿಸಲಾಯಿತು. ಉಚಿತ ತರಬೇತಿ ಶಿಬಿರ ಯಶಸ್ವಿಯಾಗಿದ್ದಕ್ಕೆ, ಇದಕ್ಕೆ ಸಹಕರಿಸಿದ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಮುಖ್ಯಗುರು ಎನ್. ಪಂಪಾಪತಿ ಇವರು ಮಾತನಾಡಿ, ಬೇಸಿಗೆಯ ರಜೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸವಾಲಿನ ಕೆಲಸವಾಗುತ್ತದೆ. ಅಂತಹ ಬೇಸಿಗೆ ರಜೆಯನ್ನು ವ್ಯವಸ್ಥಿತವಾಗಿ ಮಕ್ಕಳಿಗೆ ಶಿಕ್ಷಣಕ್ಕೆ ಅಂಟಿಕೊಳ್ಳುವ ರೀತಿಯಲ್ಲಿ ಈ ರೀತಿಯ ಉಚಿತ ತರಗತಿಗಳನ್ನು ನಡೆಸಿರುವ ವಿದ್ಯಾರ್ಥಿ ಪರಿಷತ್ನ ಪ್ರಯತ್ನ ಬಹಳ ಉಪಯುಕ್ತವಾದದಾಗಿದೆ ಎಂದು ತಿಳಿಸಿದರು. ಶಿಕ್ಷಣಪ್ರೇಮಿ ವಿ. ಹನುಮೇಶ್ ಮಾತನಾಡಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅತಿ ಅವಶ್ಯಕವಾದದ್ದಾಗಿದೆ, ಆ ವಿಷಯವನ್ನು ಮನಗಂಡು ಇಂತಹ ಉಪಯುಕ್ತ ತರಗತಿ ನಡೆಸಿರುವುದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಏ ಎಸ್ ಐ ರಮಣ್ ಕುಮಾರ್, ಶಿಕ್ಷಕ ಪುನೀತ್ ಕುಮಾರ್, ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.