ವಿದ್ಯಾರ್ಥಿಗಳಿಂದ ಗುರು ವಂದನೆ

ಬೀದರ್:ಸೆ.8: ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಗುರು ವಂದನೆ ಸಲ್ಲಿಸಿದರು.
ಅಕ್ಷರ ಕಲಿಸಿದ ಶಿಕ್ಷಕರ ಪಾದಕ್ಕೆ ಪೂಜೆ ಸಲ್ಲಿಸಿ, ಶಾಲು ಹೊದಿಸಿ, ಪುಷ್ಪವೃಷ್ಟಿ ಮಾಡಿ ಗೌರವಿಸಿದರು.
ಶಾಲೆ ಆಡಳಿತ ಮಂಡಳಿ ಹಾಗೂ ಮಕ್ಕಳಿಂದ ಆಯೋಜಿಸಿದ್ದ ಹಗ್ಗ ಜಗ್ಗಾಟ, ಕುರ್ಚಿ ಆಟ, ನಿಂಬೆ ಚಮಚ ಆಟ, ಓಟ ಮೊದಲಾದ ಸ್ಪರ್ಧೆಗಳಲ್ಲಿ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
ದೇವರಿಗೆ ಸಮಾನ: ಗುರುವನ್ನು ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ನ್ಯಾಯ, ನೀತಿ, ಧರ್ಮ ಆಧಾರಿತ ಜ್ಞಾನ ನೀಡುವವನೇ ನಿಜವಾದ ಗುರು ಎಂದು ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಯಟ್ ಸಂಪನ್ಮೂಲ ವ್ಯಕ್ತಿ ಸಂತೋಷ ಪೂಜಾರಿ ನುಡಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಶಿಕ್ಷಕರಾಗಿದ್ದರು. ಹೀಗಾಗಿಯೇ ಅವರು ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಹುದ್ದೆಗೆ ಏರಿದರು. ಶಿಕ್ಷಕರಿಂದ ಸದೃಢ ಹಾಗೂ ಸುಂದರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ನಂಬಿದ್ದರು ಎಂದು ತಿಳಿಸಿದರು.
ರಾಧಾಕೃಷ್ಣನ್, ಡಾ. ಎಪಿಜೆ ಅಬ್ದುಲ್ ಕಲಾಂ ಅವರಂಥ ಮಹಾ ಪುರುಷರನ್ನು ರೂಪಿಸಿದವರೇ ಶಿಕ್ಷಕರು. ಚಂದ್ರಯಾನ 3 ರ ಯಶಸ್ಸಿನ ಮೂಲಕ ವಿಶ್ವವೇ ಬೆರಗುಗೊಳ್ಳುವಂಥ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳು ಈ ಹಂತಕ್ಕೆ ಬೆಳೆಯಲು ಕೂಡ ಶಿಕ್ಷಕರೇ ಕಾರಣರು ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಯಾವುದೇ ದೇಶದ ವಿಕಾಸವು ಶಿಕ್ಷಕರನ್ನು ಅವಲಂಬಿಸಿದೆ. ಶಿಕ್ಷಕರು ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೇ ಬದಲಿಸಬಹುದು ಎಂದು ತಿಳಿಸಿದರು.
ಜನಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಶಿವರಾಜ ಹುಡೇದ, ಶಿವಲಿಂಗಪ್ಪ ಜಲಾದೆ, ಆಡಳಿತಾಧಿಕಾರಿ ಸೌಭಾಗ್ಯವತಿ, ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್ ಖಮಿತಕರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಮತ್ತಿತರರು ಇದ್ದರು.
ಭಾಗ್ಯವಂತಿ ಸ್ವಾಗತಿಸಿದರು. ಋತುಜಾ ನಿರೂಪಿಸಿದರು. ಸಂಗಮೇಶ ವಂದಿಸಿದರು.