ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಕರೆ


 ಸಂಜೆವಾಣಿ ವಾರ್ತೆ
ಹ.ಬೊ.ಹಳ್ಳಿ: ಫೆ.29 ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸಾಹಿತ್ಯ ಆಸಕ್ತಿಯನ್ನು ಮೂಡಿಸಬೇಕಾಗಿದೆ ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಐ. ಹೆಚ್. ಹೂಗಾರ್  ಹೇಳಿದರು
 ಪಟ್ಟಣದ ಬಿ.ಸಿ.ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ “ದಿ.ಆಲೂರು ವೀರಪ್ಪ ದತ್ತಿ, ಡಿ.ಸಾಕುಮಾಬಿ ಕಾಸಿಂಸಾಬ್ ದತ್ತಿ ಮತ್ತು ಗಂಗಾವತಿ ಪಂಪಾಪತೆಪ್ಪ   ನರಸಮ್ಮ ದತ್ತಿ” ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು  ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿ ಇಂಥ ವಿನೂತನ ಕಾರ್ಯಕ್ರಮಗಳನ್ನು  ಸಂಘಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನಾನು ನೆನೆಯುತ್ತ ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಜರುಗಲಿ ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದರು..
ಮುಖ್ಯ ಭಾಷಣಕಾರರಾದ ಡಿ.ಅಬ್ದುಲ್ ನಿಸಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಎರೆಡು ಸಾವಿರ ವರ್ಷಗಳ ಇತಿಹಾಸವಿದೆ. ಅನೇಕ ಶಿಲಾ ಶಾಸನಗಳಲ್ಲಿ ಮತ್ತು ಗ್ರೀಕ್ ನಾಟಕಗಳಲ್ಲಿ ಕನ್ನಡ ಪದಗಳ ಬಳಕೆ ಕಂಡು ಬರುತ್ತದೆ. ಸಾಹಿತ್ಯದ ಪ್ರಕಾರಗಳಾದ ಕಥೆ,ಕವನ,ಕಾದಂಬರಿ,ನಾಟಕ,ಆತ್ಮಕಥನ,ಜೀವನ ಚರಿತ್ರೆ,ಪ್ರವಾಸ ಕಥನ,ಪ್ರಬಂಧ ಮುಂತಾದವುಗಳು ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಅನೇಕ ಸಾಹಿತಿಗಳ ಕಥೆ ಕಾದಂಬರಿಗಳು ನಾಟಕ ಮತ್ತು ಸಿನೇಮಾಗಳಾಗಿ ಜನಮಾನಸ ತಲುಪಿವೆ ಎಂದರು.
ಗಣೇಶ್ ರಾವ್ ಹವಲ್ದಾರ್  ಮಾತನಾಡಿ ಲಂಕೇಶ್, ಕಾರ್ನಾಡ್, ತ್ರಿವೇಣಿ, ಚದುರಂಗ, ತರಾಸು ಮುಂತಾದವರ ಕೃತಿಗಳು ನಾಟಕ, ಚಲನಚಿತ್ರಗಳಾಗಿ ರಚನೆಗೊಂಡು ಸಾಹಿತ್ಯದ ಅಭಿರುಚಿ ಮೂಡಿಸಿವೆ ಎಂದರು.
ಎ.ಎಸ್.ಕರಿಬಸಪ್ಪ,,ಬಿ.ಸಿ.ಎಂ.ವಿಸ್ತರಣಾಧಿಕಾರಿಗಳಾದ ವಿ.ರಮೇಶ್, ಡಿ.ರಾಮನಮಲಿ,  ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಕಸಾಪ ಅಧ್ಯಕ್ಷರಾದ ಗೂಳಪ್ಪ ಹುಲಿಮನಿ ಮಾತನಾಡಿ , ನಮ್ಮ ದೇಶದ ಎರೆಡು ಮಹಾನ್ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಕಥಾ ವಸ್ತುವನ್ನೇ ಆಧಾರವಾಗಿಟ್ಟುಕೊಂಡು ಅನೇಕ ಯಕ್ಷಗಾನ, ಬಯಲಾಟ, ದೊಡ್ಡಾಟ, ನಾಟಕ ಹಾಗೂ ಚಲನ ಚಿತ್ರಗಳಾಗಿ ನಿರ್ಮಾಣಗೊಂಡು ಜನ ಸಾಮಾನ್ಯರನ್ನು ತಲುಪಿ ಸಾಹಿತ್ಯದ ಗಂಧ ಗಾಳಿಯೂ ಸೋಂಕದ ಗಂಡು ಹೆಣ್ಣು ಎನ್ನದೆ ಅನೇಕ ಹಳ್ಳಿಗಾಡಿನ ಅನಕ್ಷರಸ್ಥರಿಗೆ ನಾಟಕ ಹಾಗೂ ಸಿನೇಮಾದ ಮೂಲಕ ಸಾಹಿತ್ಯ ಆಪ್ತವಾಗಿದೆ. ಅಂಥವರಲ್ಲಿ ನಮ್ಮ ತಾಲೂಕಿನವರೇ ಆದ ಯಡ್ರಾಮನಹಳ್ಳಿ ದೊಡ್ಡಭರಮಪ್ಪ,ನಂದಿಪುರ ದೇವರೆಡ್ಡಿ,ಕಿತ್ನೂರು ಬಾಳಪ್ಪ,ಏಣಿಗಿ ಕಾಸಿಂಸಾಬ್,ಉಲುವತ್ತಿ ವೀರಣ್ಣ,ಕೋಗಳಿ ಪಂಪಣ್ಣ,ದುರ್ಗದಾಸ್ ಮುಂತಾದ ಕಲಾವಿದರನ್ನು ನೆನೆದು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ತಂಬ್ರಹಳ್ಳಿ ಮತ್ತು ಹಂಪಸಾಗರ ಹೋಬಳಿ ಅಧ್ಯಕ್ಷರಾದ ಎಸ್.ವಿ.ಪಾಟಿಲ್ ಮತ್ತು ಎಲ್.ಬಸವರಾಜಪ್ಪ, ನಿಲಯ ಮೇಲ್ವಿಚಾರಕರಾದ ವೀಣಾ ಕೆ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ಹೆಚ್ ಪಿ ಅಮೃತ ಪ್ರಾರ್ಥಿಸಿದರೆ, ಬಸಂತಿ ಸ್ವಾಗತಿಸಿದರು. ಮಹೇಶ್ವರಿ ಮತ್ತು ಜಯಸೂರ್ಯ ಕಾರ್ಯಕ್ರಮ ನಿರ್ವಹಿಸಿದರು.