ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಹಾಗು ಸಂಶೋಧನಾ ಪ್ರವೃತ್ತಿ ಬೆಳೆಸಲು ಶ್ರಮಿಸಿ : ದಾನಿ ಬಾಬುರಾವ

ಬೀದರ:ಡಿ.25:ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕಲಿಕೆಯೊಂದಿಗೆ ವೈಜ್ಞಾನಿಕ ಚಿಂತನೆ ಹಾಗೂ ತಾರ್ಕಿಕ ಪ್ರಜ್ಞೆಯೊಂದಿಗೆ ವಿಜ್ಞಾನದ ಅನ್ವೇಷಣೆ, ಸಂಶೋಧನಾ ಪ್ರವೃತ್ತಿ ಬೆಳೆಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಸಿದ್ಧಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಕಾರ್ಯಕಾರಿ ಮಂಡಳಿ ಸದಸ್ಯರಾದ ಶ್ರೀ ಬಾಬುರಾವ ದಾನಿಯವರು ನುಡಿದರು. ನಗರದ ಶರಣ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ಬೀದರ ಜಿಲ್ಲಾ ಮಟ್ಟದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಭಾರತ ಸರ್ಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು,ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಬೀದರ ಹಾಗೂ ಕ.ರಾ.ವಿ.ಪ ಜಿಲ್ಲಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯಗಳ ಕುರಿತು ಬೀದರ ಜಿಲ್ಲೆಯ ವಿವಿಧ ತಾಲೂಕಿನ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವಂತ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಆಡಳಿತ ಮಂಡಳಿ ಸದಸ್ಯರಾದ ಮಹಾರುದ್ರಪ್ಪ ಅಣದುರೆ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು,ವಿಜ್ಞಾನ ಸಮಾವೇಶವು ಮಕ್ಕಳ ಬೌದ್ಧಿಕ ವಿಕಸನ ಹಾಗೂ ಅನ್ವೇಷಣೆ ನಡೆಸಲು ಸಹಕಾರಿಯಾಗಿದೆ ಹಾಗು ಮಕ್ಕಳ ವಿಜ್ಞಾನ ಸಮಾವೇಶವು ವಿದ್ಯಾರ್ಥಿಗಳಲ್ಲಿ ಪರಿಸರದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಂಡು ಉತ್ತಮ ಸಂಶೋದನೆಗಳನ್ನು ಕೈಗೊಳ್ಳಲು ನೆರವಾಗಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತ ಕ.ರಾ.ವಿ.ಪ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಸುರೇಂದ್ರನಾಥ ಹುಡ್ಗಿಕರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಹವ್ಯಾಸ ಬದಲಾಗಿದೆ ವಿಜ್ಞಾನ ಚಟುವಟಿಕೆಗಳಲ್ಲಿ ಅವರ ಆಸಕ್ತಿ ಆಶಾದಾಯಕವಾಗಿಲ್ಲ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವ ವಿಜ್ಞಾನ ಸಮಾವೇಶಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕಿದೆ ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಪ್ರೇರೇಪಿಸುವ ಜೊತೆಗೆ ಅವರಲ್ಲಿ ಕಲಿಕಾ ಕುತೂಹಲ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಉತ್ತೇಜಿಸಬೇಕು
ವಿದ್ಯಾರ್ಥಿಗಳು ಸೂಕ್ತ ಅವಕಾಶಗಳನ್ನು ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಇಂತಹ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಸಚ್ಚಿದಾನಂದ, ವಿಜ್ಞಾನ ಸಂಪನ್ಮೂಲ ಶಿಕ್ಷಕರಾದ ಕಲಾಲ ದೇವಿ ಪ್ರಸಾದ ಹಾಗು ಸದಸ್ಯರಾದ ರಾಜಕುಮಾರ ಧುಮನಸುರೆ ಮಾತನಾಡಿದರು.
ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕರಾದ ಶ್ರೀ ಸಂಜೀವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಶರಣ ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೀಲಾ, ಶೈಕ್ಷಣಿಕ ಸಂಯೋಜಕರಾದ ಅಮರ ಮಾಳಗೆ, ರಿಷಿಕೇಶ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಸಂತೋಷ ಕುಮಾರ ಮಂಗಳೂರೆ, ಬೀದರ ಜಿಲ್ಲೆಯ ಪ್ರೌಢ ಶಾಲಾ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಾರ್ಗದರ್ಶಿ ಶಿಕ್ಷಕ ಹಾಗು ಶಿಕ್ಷಕಿಯರು ಉಪಸ್ಥಿತರಿದ್ದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡಗಳು : ನಗರ ಹಿರಿಯ ವಿಭಾಗ: .ಅಭಿಷೇಕ, ಸಾಯಿನಾಥ್, ಅರುಣೋದಯ ಪ್ರೌಢಶಾಲೆ, ಬೀದರ.2. ಪ್ರದೀಪ,ಕೃಷ್ಣ, ಅಂಬೇಡ್ಕರ್ ತತ್ವ ಶಾಲೆ ಬೀದರ.3. ಮಾಳೇಶ, ಕೃಷ್ಣ, ಅಂಬೇಡ್ಕರ ತತ್ವ ಪ್ರೌಢ ಶಾಲೆ ಬೀದರ.
ನಗರ ಕಿರಿಯ ವಿಭಾಗ : ಅಮರನಾಥ ಮತ್ತು ಪ್ರೀತಿ, ಶ್ರೀ ಕಾಳೂರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹುಮನಾಬಾದ 2. ವಿಶ್ವನಾಥ ಮತ್ತು ಸಂಧ್ಯಾ ರಾಮ ಅಂಡ್ ರಾಜ್ ಪ್ರೌಢ ಶಾಲೆ ಹುಮನಾಬಾದ.
ಗ್ರಾಮೀಣ ಹಿರಿಯ ವಿಭಾಗ :ಭಾಗ್ಯಶ್ರೀ ಮತ್ತು ಅಂಕಿತಾ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯ ಜನತಾ ನಗರ ಹುಡುಗಿ, ಹುಮನಾಬಾದ.
ಗ್ರಾಮೀಣ ಕಿರಿಯ ವಿಭಾಗ : ಭೂಮಿಕಾ ಮತ್ತು ಕವಿತಾ 2. ನಂದಿನಿ ಮತ್ತು ಸೃಷ್ಟಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯ ಜನತಾ ನಗರ ಹುಡುಗಿ, ಹುಮನಾಬಾದ.