ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲಿ

ಭಾಲ್ಕಿ:ಜೂ.6: ಪರಿಸರ ರಕ್ಷಣೆಯ ಘೋಷಣೆಗಳು ಘೋಷಣೆಗಳಾಗಿಯೇ ಉಳಿಯದೆ, ಆಚರಣೆಗೂ ಬರುವಂತಾಗಬೇಕು. ಮನೆ, ಶಾಲಾ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಎಂದು ಗುತ್ತಿಗೆದಾರ ರಾಜಕುಮಾರ ಬಿರಾದಾರ್ ಹೇಳಿದರು.

ತಾಲೂಕಿನ ತಳವಾಡ(ಕೆ) ಗ್ರಾಮದ ಪಂಚಶೀಲ ಅನುದಾನಿತ ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರಯೆರೆದು ಮಾತನಾಡಿದರು.

ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ಸಸಿಗಳನ್ನು ಬೆಳೆಸದಿದ್ದಲ್ಲಿ, ಭವಿಷ್ಯದಲ್ಲಿ ನಾವು ಆರೋಗ್ಯವಂತರಾಗಿ ಬದುಕುವುದು ಕಷ್ಟವಾಗುತ್ತದೆ. ಮುಂದಿನ ಪೀಳಿಗೆಯವರು ನೆಮ್ಮದಿಯಿಂದ ಬಾಳಬೇಕಿದ್ದರೆ, ಹಸಿರು ವಾತಾವರಣ ಆವರಿಸಬೇಕು. ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ.

ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಪರಿಸರ ಪ್ರೇಮ, ಕಾಳಜಿ ಬೆಳೆಸಿಕೊಂಡು ತಮ್ಮ ಮನೆ, ಶಾಲಾ ಆವರಣ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಮುಖ್ಯಗುರು ಚಂದ್ರಕಾಂತ ಖಂಡಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಸಹಾದೇವ ಮಡಿವಾಳ ಸೇರಿದಂತೆ ಹಲವರು ಇದ್ದರು.