ವಿದ್ಯಾರ್ಥಿಗಳಲ್ಲಿ ನೀತಿಯ ಬದಲಾಗಿ ಜಾತಿ ಬಿತ್ತುತ್ತಿರುವುದು ದುರದೃಷ್ಟಕರ

ಅಫಜಲಪುರ:ಮಾ.15: ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೆ ಇರುತ್ತವೆ ಹಾಗೆಯೇ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್‍ಸಿ, ಎಂಎಸ್‍ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಐಕ್ಯೂಎಸಿ, ಎನ್‍ಎಸ್‍ಎಸ್, ಸಾಂಸ್ಕಂತಿಕ, ರೆಡ್‍ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಂದು ಕಾಲದಲ್ಲಿ ಸರ್ಕಾರಿ ಪದವಿ ಕಾಲೇಜು ಎಂದರೆ ಮೂಗು ಮುರಿಯುವ ಜನರಿದ್ದರು ಈಗ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ನೋಡಿ ಖುಷಿಯಾಗುತ್ತಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ನಂತ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪಾಲಕರಿಗೆ, ತಾಲೂಕಿಗೆ ಹೆಮ್ಮೆ ತರುವಂತ ಕೆಲಸ ಮಾಡಬೇಕು ಅಂದಾಗ ನನಗೆ ಬಹಳ ಖುಷಿಯಾಗುತ್ತಿದೆ ಎಂದ ಅವರು ಈ ಕಾಲೇಜಿನ ಅಭಿವೃದ್ದಿಗಾಗಿ ಪ್ರಾಚಾರ್ಯರು ಕ್ರೀಯಾ ಯೋಜನೆ ರೂಪಿಸಿ ಕೊಟ್ಟಿದ್ದಾರೆ ಕಾಲೇಜಿನ ಅಭಿವೃದ್ದಿಗಾಗಿ 2.60 ಕೋಟಿ ಅನುದಾನ ಮೀಸಲಿಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ಹೆಚ್.ಟಿ ಪೋತೆ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಬಡತನದ ದಿನಗಳನ್ನು ಸದಾ ನೆನಪಿಟ್ಟುಕೊಳ್ಳಬೇಕು. ಪಾಲಕರು ನಿಮ್ಮ ಓದಿಗಾಗಿ ಎಂತಹ ತ್ಯಾಗಗಳನ್ನು ಮಾಡಿದ್ದಾರೆಂದು ಅರಿಯಬೇಕು. ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸುವೆವು ಎಂಬ ಛಲವಿರಬೇಕು ಎಂದ ಅವರು ವಿದ್ಯಾರ್ಥಿಗಳಲ್ಲಿ ನಾವು ನೀತಿಯ ಬದಲಾಗಿ ಜಾತಿಗಳನ್ನು ಬಿತ್ತುತಿದ್ದೇವೆ ಇದರ ಪರಿಣಾಮ ಬಹಳ ದುರದೃಷ್ಟಕರವಾಗುತ್ತಿದೆ ಎಂದರು.ಇನ್ನೂ ನಮ್ಮ ಕಲ್ಯಾಣ ಕರ್ನಾಟಕದ ಇತಿಹಾಸ ಬಹಳ ದೊಡ್ಡದು, ಐತಿಹಾಸಿಕ ಇತಿಹಾಸವುಳ್ಳವರು ನಾವು ಹೀಗಾಗಿ ಯಾರ ಬಳಿಯೂ ಕೀಳರಿಮೆಯಿಂದ ಇರಬೇಡಿ, ಎದೆಯುಬ್ಬಿಸಿ ಕಲ್ಯಾಣ ನಾಡಿನವರೆಂದು ಹೇಳುವ ಅಭಿಮಾನ ಇಟ್ಟುಕೊಳ್ಳಿ. ಬದುಕು ಕಟ್ಟಿಕೊಳ್ಳುವ ಕನಸು ಕಾಣಿ, ಇಲ್ಲದಿದ್ದರೆ ಬದುಕೇ ನಶ್ವರವಾಗಲಿದೆ ಎಂದರು.

ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದ್ದು ಇದನ್ನು ಮೊಬೈಲ್ ಬಳಕೆಯಲ್ಲಿ ಕಳೆಯಬೇಡಿ. ಮಹಾನ್ ಸಾಧಕರೆಲ್ಲರೂ ಬಡವರಾಗಿದ್ದರು, ಅವರಿಗೆ ನಮ್ಮಷ್ಟು ಅನುಕೂಲಗಳಿರಲಿಲ್ಲ. ಈಗ ಎಲ್ಲ ಅನುಕೂಲಗಳಿದ್ದರೂ ಸಾಧನೆ ಮಾಡಲಾಗುತ್ತಿಲ್ಲ ಎಂದರೆ ಯುವ ಜನಾಂಗ ದಾರಿ ತಪ್ಪುತ್ತಿದೆ ಎಂದರ್ಥ. ನಿಮಗೆ ನೀವೆ ಬೆಳಕಾಗಬೇಕು ಈ ನಿಟ್ಟಿನಲ್ಲಿ ಹೆಚ್ಚು ಓದಿ, ಹೆಚ್ಚು ಅಧ್ಯಯನ ಮಾಡಿ ದೊಡ್ಡ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಶರಣಬಸಪ್ಪ ಅವಟೆ ಅದ್ಯಕ್ಷತೆ ವಹಿಸಿದರು.ಪುರಸಭೆ ಅದ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ್, ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಮುಖಂಡರಾದ ಸಿದ್ದು ಶಿರಸಗಿ, ರಾಜಶೇಖರ ಪಾಟೀಲ್, ಶರಣು ಕುಂಬಾರ, ಶಿವಾನಂದ ಗಾಡಿಸಾಹುಕಾರ, ಘತ್ತರಗಿ ಗ್ರಾ.ಪಂ ಅಧ್ಯಕ್ಷ ವಿಠ್ಠಲ್ ನಾಟಿಕಾರ, ಉಪನ್ಯಾಸಕರಾದ ಡಾ. ಸೂಗೂರೇಶ್ವರ ಆರ್.ಎಂ, ಭಾಗಪ್ಪ ಛಲವಾದಿ, ದತ್ತಾತ್ರೇಯ ಸಿ.ಹೆಚ್, ಡಾ. ಸಾವಿತ್ರಿ ಕೆ, ಖುತೇಜಾ ನಸ್ರೀನ್, ಮಲ್ಲಿಕಾರ್ಜುನ ಜಿ, ಡಾ. ಸಾವಿತ್ರಿ ಕೃಷ್ಣ, ಡಾ. ಎಂ.ಎಸ್ ರಾಜೇಶ್ವರಿ ಡಾ. ಸಂಗಣ್ಣ ಎಂ ಸಿಂಗೆ, ಗೌತಮ ಸಕ್ಕರಗಿ ಸೇರಿದಂತೆ ಅನೇಕರು ಇದ್ದರು.