ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಅಭಿಮಾನ ಕಿಚ್ಚು ಬೆಳೆಯಬೇಕು

ರಾಯಚೂರು, ಮೇ.೨೮- ವಿದ್ಯಾರ್ಥಿಗಳು
ಭಾಷಾಭಿಮಾನ ಜೊತೆಗೆ ಜೀವನದಲ್ಲಿ ಶ್ರಮವಹಿಸಿ ಓದಿ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕ್ಷೇತ್ರ ಶೈಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಅವರು ಹೇಳಿದರು
ಅವರಿಂದು ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕನ್ನಡ ಭಾಷೆ ಕಿಚ್ಚನ್ನು ಬೆಳೆಸಿಕೊಳ್ಳಬೇಕು.
ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಭಾಷೆಯನ್ನು ಪಂಪ, ರನ್ನರಾದಿಯಾಗಿ ಕುವೆಂಪು, ಕಾರಂತರು ಗಟ್ಟಿಯಾಗಿ, ಆಳವಾಗಿ ಮತ್ತು ಅರ್ಥಪೂರ್ಣವಾಗಿ ಬೆಳೆಸಿದ್ದಾರೆ. ಈಗ ನಾವು ಭಾಷೆಯನ್ನು ಉಳಿಸಬೇಕು. ಸಮಾರಂಭಗಳಿಂದ ಭಾಷೆ ಬೆಳವಣಿಗೆ ಸಾಧ್ಯವಿಲ್ಲ. ಕನ್ನಡ ಕಲಿಯುವಿಕೆ ಆಸಕ್ತಿದಾಯಕವಾಗಬೇಕು. ಶಾಲಾ, ಕಾಲೇಜುಗಳಲ್ಲಿ ವ್ಯಾಕರಣ, ಪ್ರಬಂಧ ಸೇರಿದಂತೆ ಕನ್ನಡ ಅರ್ಥಪೂರ್ಣ ಕಲಿಕೆ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡದ ಕಿಚ್ಚನ್ನು ವಿದ್ಯಾರ್ಥಿಗಳಲ್ಲಿ ತುಂಬಿದಲ್ಲಿ ಕನ್ನಡ ಭಾಷೆ ತನ್ನ ಈ ಹಿಂದಿನ ಸುವರ್ಣಯುಗ ಕಾಣಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿಭಾವಂತರಾಗಲು ಅದರಲ್ಲಿ ವಿಶೇಷವಾಗಿ ಪೋಷಕರ ಪಾತ್ರ ಅಗತ್ಯವಿದೆ ಎಂದರು. ಪೋಷಕರು ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ರೂಢಿಸ್ಕೊಳ್ಳಬೇಕು. ಇದರಿಂದ ಮಕ್ಕಳು ಸುಲಭವಾಗಿ ಕನ್ನಡ ಮಾತನಾಡುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಗುರುತಿಸಿಕೊಳ್ಳುತ್ತಾರೆ ಎಂದರು.
ಕನ್ನಡ ನೆಲ ಜಲ ಭಾಷೆಗೆ ನಾವು ಮೊದಲ ಆದ್ಯತೆ ನೀಡಬೇಕು ಎಂದರು. ಸಾಹಿತ್ಯದ ಘಟ್ಟ ಕನ್ನಡ ಭಾಷೆ. ಕನ್ನಡ ಭಾಷೆ ಸರಳವಲ್ಲ ಅದರಲ್ಲಿ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದುಕೊಂಡಿರುವುದು ಶ್ಲಾಘನೀಯ ಎಂದರು.
ಕನ್ನಡ ಭಾಷೆಯನ್ನು ಮಾತನಾಡುವುದು ಚಂದ ಕನ್ನಡ ಭಾಷೆಯನ್ನು ಬರೆಯುವುದು ಅಂದ ಎಂದರು.ಸರ್ಕಾರಿ ಶಾಲೆಗಳಲ್ಲಿ ಮಾತ್ರ ಪ್ರತಿಭಾವಂತ ಶಿಕ್ಷಕರ ಸಿಗಲು ಸಾಧ್ಯವೆಂದರು.
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಹಿರಿಯ ಮನೋರೋಗ ತಜ್ಞ ಡಾ. ಮನೋಹರ ವೈ ಪತ್ತಾರ ಮಾತನಾಡುತ್ತಾ
ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಹೆಚ್ಚಿನ ಗೌರವ ನೀಡಬೇಕು. ವಿದ್ಯಾರ್ಥಿಗಳು ಪರಿಶ್ರಮ ಹಾದಿಯಲ್ಲಿ ನಡೆದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆಂದರೆ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕಾದರೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬಹಳ ಮುಖ್ಯವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಪತ್ತೆಪುರ, ಹನುಮಂತಪ್ಪ ಗವಾಯಿ, ವೆಂಕಟೇಶ್ ಬೇವಿನಬಂಚಿ, ಪ್ರಭುಲಿಂಗ ಗದ್ದಿ, ಚಂದ್ರಶೇಖರ್ ರೆಡ್ಡಿ, ಮೋಯಿನುಲ್ ಹಕ್, ಮಲ್ಲೇಶ ನಾಯಕ, ವಿದ್ಯಾರ್ಥಿಗಳಿಗೆ ಪೋಷಕರು ಶಿಕ್ಷಕರು ಸೇರಿದಂತೆ ಉಪಸ್ಥಿತರಿದ್ದರು.