ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಾಳ್ಮೆ ಮುಖ್ಯ

ತುಮಕೂರು, ಜ. ೧೩- ಕಲ್ಪತರು ನಾಡಿಗೆ ಶೈಕ್ಷಣಿಕ ನಗರ ಎಂದು ಹೆಸರು ಬರಲು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶಿಕ್ಷಣ ಭೀಷ್ಮ ಡಾ.ಹೆಚ್. ಗಂಗಾಧರಯ್ಯ ರವರ ಪಾಲಿದೆ. ಅದೇ ರೀತಿ ತುಮಕೂರಿಗೆ ೨೦೦೪ ರಲ್ಲಿ ವಿಶ್ವವಿದ್ಯಾಲಯ ತಂದ ಕೀರ್ತಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಎಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿ ಕಚಟುವಟಿಕೆ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ರಿಬ್ಬನ್, ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ- ಗಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನದೆ ವೈಶಿಷ್ಟ್ಯಗಳನ್ನು ಹೊಂದಿರುವ ತುಮಕೂರು ಅನೇಕ ವಿದ್ಯಾ ಸಂಸ್ಥೆಗಳು, ತಂತ್ರಜ್ಞರು, ವಿಜ್ಞಾನಿಗಳು, ಸಾಹಿತ್ಯ, ಕಲೆ-ಸಾಂಸ್ಕೃತಿಕ ಸಂಪ್ರದಾಯಕ್ಕೆ ಒತ್ತು ನೀಡಿದೆ. ನಡೆದಾಡುವ ದೇವರೆನಿಸಿದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರವರಂತಹ ಅನೇಕ ಮಹಾನ್ ನಾಯಕರನ್ನು ಕೊಡುಗೆಯಾಗಿ ಈ ನಾಡಿಗೆ ನೀಡಿದೆ ಎಂದರು.
ಕಳೆದ ೩೦ ವರ್ಷಗಳಿಂದ ವಿದ್ಯಾರ್ಥಿಗಳ ನಡುವೆ ಪಾಠ, ಪ್ರವಚನ ಜತೆಗಿದ್ದೇನೆ. ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸುವ ಸುಲಭವಾದ ಮಾರ್ಗವಿದ್ದರೂ ಹಲವು ಸವಾಲುಗಳು ಎದರಾಗುತ್ತಿವೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಇರಬೇಕು. ಜ್ಞಾನಾರ್ಜನೆ ಜತೆಗೆ ಉದ್ಯೋಗ ಪಡೆದುಕೊಳ್ಳಲು ಒತ್ತು ನೀಡಿ. ಆಸಕ್ತರಾಗಿ ಓದಿದಾಗ ಎಂಥ ಕೆಲಸವನ್ನಾದರೂ ಸುಲಭವಾಗಿ ಪಡೆಯಬಹುದು. ಸಾಮಾನ್ಯನಿಗೆ ಇರುವ ತಾಳ್ಮೆ ಈಗೀನ ವಿದ್ಯಾರ್ಥಿಗಳಿಗೆ ಇಲ್ಲ. ಮಾನಸಿಕ ಆರೋಗ್ಯ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಎಂದು ಹೇಳಿದರು.
ರಾಜ್ಯದಲ್ಲಿ ತುಮಕೂರು ವಿಭಿನ್ನ ರೀತಿಯ ವಿಶೇಷ ಸ್ಥಾನ, ಮಾನ ಹೊಂದಿದ್ದು, ಇಂಡಸ್ಟ್ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉತ್ಪಾದನಾ ಘಟಕಗಳಿವೆ. ಕಲ್ಪತರು ನಾಡಿನ ಕೊಬ್ಬರಿಗೆ ದೇಶ ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ. ಅಡಿಕೆಯಿಂದ ಟೀ ಮಾಡಬಹುದು ಎಂದು ತುಮಕೂರಿನ ಯುವಕನೊಬ್ಬ ನಿರೂಪಿಸಿದ್ದಾನೆ ಎಂದರು.
ಬೆಂಗಳೂರಿನ ಮಹಾರಾಣಿ ಲಕ್ಷ್ಮೀಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಿ.ಎ.ಅನ್ನದಾನೇಶ್ ಮಾತನಾಡಿ, ಹಿಂದಿನ ವಿವಿಗಳಲ್ಲಿ ಸಾಮಾನ್ಯ ಜ್ಞಾನ ಇತ್ತು. ಇಂದಿನ ವಿವಿಯಲ್ಲಿ ಕೌಶಲ್ಯ ಇದೆ. ೧೨ನೇ ಶತಮಾದಲ್ಲಿ ಇವೆರಡು ವಿಚಾರಗಳು ಜತೆಗಿವು. ಆದರೆ ಪ್ರಸ್ತುತ ಕೌಶಲ್ಯ ತಮ್ಮದೇ ಆದ ವಿಚಾರ ವಂತಿಕೆಯನ್ನು ಹುಟ್ಟಿ ಹಾಕಿವೆ ಎಂದರು.
ಸಾಹಿತ್ಯದಲ್ಲಿ ಪ್ರೀತಿ ಇರಬೇಕು.ಕಾವ್ಯ-ದ್ರವ್ಯದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲ. ಹಳೆಯ ಕಾವ್ಯಗಳ ಪದ ಪಾಂಡಿತ್ಯ ಇಂದಿನ ಕಾವ್ಯಗಳಲಿಲ್ಲ. ದ್ವೇಷದ ಕವಿತೆಗಳು ಹೆಚ್ಚಿವೆ. ನೋವಿನಿಂದ ಹುಟ್ಟಿದ ಹಲವು ಕಾವ್ಯ ಕವನಗಳಿಗೆ ಸಾವಿಲ್ಲ. ಕವಿತೆಗೆ ಬಳಸುವ ಸಲಕರಣೆಗಳು ಇಂದು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಾಲತಾ, ಸಹಾಯಕ ಆಡಳಿತಾಧಿಕಾರಿ ಕೆ.ಹೆಚ್.ಖಲಂದರ್ ಪಾಷ, ಕುಣಿಗಲ್‌ನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಗೋವಿಂದರಾಯ, ಚೆನ್ನರಾಯಪಟ್ಟಣದ ಚಿತ್ರಕಲಾವಿದರಾದ ಜಿ.ಎಸ್.ಶಿವಶಂಕರಪ್ಪ, ಕನ್ನಡ ವಿಭಾಗದ ಪ್ರೊ.ಮುಖ್ಯಸ್ಥರುರಾದ ಪ್ರೊ.ರಮೇಶ್ ಮಣ್ಣೆ, ಪ್ರೊ.ಹನುಮಂತರಾಯಪ್ಪ, ಗಮಕಿಗಳಾದ ಸೀತಾಲಕ್ಷೀ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.