ವಿದ್ಯಾರ್ಥಿಗಳಲ್ಲಿನ ಪ್ರತಿಭಾಶಕ್ತಿ ಹೊರಬರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

ಬೀದರ:ಸೆ.23:ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭಾಶಕ್ತಿ ಹೊರಹೊಮ್ಮಲು ಕಲೋತ್ಸವದಂತಹ ಚಟುವಟಿಕೆಗಳು ಸೂಕ್ತ ವೇದಿಕೆಗಳಾಗಿವೆ, ಅವುಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು ಸಮಾಜದ ಜವಾಬ್ದಾರಿ ಎಂದು ಶಿಕ್ಷಣ ಸಂಯೋಜಕ ಸಂಜಪ್ಪ ಮಾನೂರೆ ಅಭಿಪ್ರಾಯ ಪಟ್ಟರು.

ಅವರು ಬೀದರ ತಾಲ್ಲೂಕಿನ ಬೆಳ್ಳೂರಿನ ಶ್ರೀ ಸಚ್ಚಿದಾನಂದ ಗುರುಕುಲದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರ್ಯ ಯೋಜನೆಗಳ ಅನುಷ್ಠಾನದಲ್ಲಿ ಶಿಕ್ಷಕರ ಯೋಗದಾನ ಮುಖ್ಯವಾದುದು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀ ಸಚ್ಚಿದಾನಂದ ಆಶ್ರಮದ ಮಾತೋಶ್ರೀ ಅಮೃತಾನಂದ ಮಯಿ ಶೈಕ್ಷಣಿಕ ಸೇವೆಗೆ, ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಶ್ರೀಮಠವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಪ್ರಸ್ತುತ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾಂವೆ, ತಾಲೂಕ ಘಟಕದ ಅಧ್ಯಕ್ಷ ರಾಜು ಸಾಗರ ಮಾತನಾಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ದತ್ತು ಸ್ವಾಮಿ, ಕೋಳಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮುದಾ, ಸದಸ್ಯರಾದ ಸಿದ್ದಾರೆಡ್ಡಿ, ಏಸುದಾಸ, ಶಾಮಣ್ಣ, ನಾಗಣ್ಣ, ಬಂಡಯ್ಯ ಸ್ವಾಮಿ, ಧರ್ಮೇಂದ್ರ ಮುಖ್ಯಗುರುಗಳಾದ ಸುಮತಿ ರುದ್ರ, ಗೌತಮ ವರ್ಮಾ, ನಿರ್ಮಲಾ ಚಂದನಹಳ್ಳಿ, ನಿರ್ಮಲಾ ಬೆಲ್ದಾರ, ಸಂಜೀವಕುಮಾರ ತಂಬಾಕೆ, ಅರ್ಜುನ ವರ್ಮಾ, ಚಂದ್ರಕಲಾ ಬೊರೆ, ದೀಲಿಪಕುಮಾರ ಸಾವಳೆ, ಶ್ರೀ ಶಾಂತಕುಮಾರ ಚಂದಾ, ನ್ಯಾನೋರಾವ ವಗ್ಗೆ ಸೇರಿದಂತೆ ಹಲವಾರು ಶಿಕ್ಷಕರು ಭಾಗವಹಿಸಿದ್ದರು. ಹದಿನೈದು ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಲೋತ್ಸವಕ್ಕೆ ಮೆರಗು ತಂದರು.

ಡಾ. ರಘುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಶೆಟ್ಟಿ ಗಾದಗೆ ಸ್ವಾಗತಿಸಿದರು. ಇಲೇಶಕುಮಾರ ವಂದನಾರ್ಪಣೆ ಸಲ್ಲಿಸಿದರು.