ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಒಳಪಡಿಸಿ ಬಿಇಓ

ಕೋಲಾರ,ಅ.೩೦- ಪ್ರಾಥಮಿಕ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಚಿಂತನೆ ಮೂಡಿಸುವುದರಿಂದ ಯಾವುದೇ ವಿಷಯದ ಪರಿಪೂರ್ಣ ಚಿತ್ರ ಕಾಣಲು ಸಾಧ್ಯವಾಗಿದ್ದು ಈ ದಿಸೆಯಲ್ಲಿ ವಿಜ್ಞಾನ ವೈಜ್ಞಾನಿಕತೆ ಬೆಳವಣಿಗೆ ನಿರಂತರ ಆಗಬೇಕು ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ ಕೆಂಪಯ್ಯ ಅಭಿಪ್ರಾಯ ಪಟ್ಟರು.
ನಗರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಂತರ ಅವರು ಮಾತಾನಾಡಿದರು.
ವಿಜ್ಞಾನ ಮತ್ತು ಜ್ಞಾನ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ವಿಜ್ಞಾನ ಬೆಳೆದಂತೆಲ್ಲಾ ವ್ಯಕ್ತಿಯ ಜ್ಞಾನ ವೃದ್ಧಿಯಾಗುತ್ತದೆ. ಇದಕ್ಕಾಗಿ ಪ್ರಾಥಮಿಕ ಹಂತದಿಂದ ಇನ್ ಸ್ಪೈರ್ ಹೆಸರಿನಲ್ಲಿ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ಸರ್ಕಾರವು ಕೋಟ್ಯಾಂತರ ರೂಪಾಯಿಗಳು ವ್ಯಯಿಸುತ್ತಿದ್ದು ಇದರ ಸದುಪಯೋಗ ಆಗಬೇಕು ಎಂದರು.
ಜ್ಞಾನ ವಿಜ್ಞಾನ ಸಮಿತಿ ಸಭೆಯು ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ನಡೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸದೃಢ ಪ್ರತಿಭಾವಂತರನ್ನು ನಿರ್ಮಿಸಲಿ ಎಂದರು.
ಡಯಟ್ ಉಪನ್ಯಾಸಕ ನಾರಾಯಣಸ್ವಾಮಿ ಮಾತಾನಾಡಿ ಸಣ್ಣ ಖರ್ಚಿನಿಂದ ತಯಾರು ಮಾಡಿ ಸಮಾಜಕ್ಕೆ ಉಪಯೋಗ ಆಗುವ ವಿಜ್ಞಾನ ಪ್ರಯೋಗಗಳು ರಾಷ್ಟ್ರಕ್ಕೆ ಕೊಡುಗೆ ಆಗಿವೆ ಎಂದರು.
ಶಿಕ್ಷಣ ಸಂಯೋಜಕಿ ಲೀಲಾರವರು ಮಾತಾನಾಡಿ ವಿದ್ಯಾರ್ಥಿಗೆ ವೈಜ್ಞಾನಿಕ ಪೂರಕ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕು. ಸಂಶೋದನೆಗಳಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಜಿ. ಶ್ರೀನಿವಾಸ್ ಮಾತಾನಾಡಿ ನಮ್ಮ ಅನ್ನದಾತರಾದ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಜ್ಞಾನ ವಿಜ್ಞಾನ ಸಮಿತಿ ನೂತನ ಅಧ್ಯಕ್ಷರಾಗಿ ರಾಮಕೃಷ್ಣಪ್ಪ ಕಾರ್ಯದರ್ಶಿ ಗಜೇಂದ್ರ, ಗೌರವಾಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಕವಿತಾ, ವಿಜಯ, ಮಮತಾ, ಸಹಕಾರ್ಯದರ್ಶಿಯಾಗಿ ಕಾರಹಳ್ಳಿ ಕವಿತಾ, ಮುನಿರಾಜು, ಖಜಾಂಚಿ ಪದ್ಮಾವತಿ, ಸಂಚಾಲಕರಾಗಿ ರುದ್ರಣ್ಣಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುಳ, ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕೆ. ಶ್ರೀನಿವಾಸ್, ಸಂಚಾಲಕ ಡಾ. ಶರಣಪ್ಪ ಗಬ್ಬೂರು ವೀಕ್ಷಕರಾಗಿ ಉಪಸ್ಥಿತರಿದ್ದರು