ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಸಾಮಾಜಿಕ ಜಾಲತಾಣಕಲ್ಲ

ದೇವದುರ್ಗ,ಆ.೧೩-
ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಅದನ್ನು ವ್ಯರ್ಥ ಮಾಡದೆ ಅಭ್ಯಾಸದ ಕಡೆ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದಿಂದ ದೂರವಿದ್ದು ಶಿಕ್ಷಣದ ಕಡೆ ಹೆಚ್ಚು ಒಲವು ತೋರಬೇಕು ಎಂದು ಪಿಡಿಒ ಕಿರಣ್‌ಬಾಬು ಹೇಳಿದರು.
ತಾಲೂಕು ಸುಂಕೇಶ್ವರಹಾಳದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ಓದುವಂಥ ವಯಸ್ಸಿನಲ್ಲಿ ಅನ್ಯ ಯೋಚನೆಗಳನ್ನು ಮಾಡದೆ ವಿದ್ಯಾಭ್ಯಾಸವೇ ಗುರಿಯಾಗಬೇಕು. ಕೀಳಿರಿಮೆ ಮರೆತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಜತೆಗೆ ನಿರ್ದಿಷ್ಟ ಗುರಿ, ನಿರಂತರ ಪರಿಶ್ರಮ ರೂಢಿಸಿಕೊಂಡರೆ ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಉಮೇಶ ಹೆಸರೂರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಕೇವಲ ಶಿಕ್ಷಣ ಪಡೆದರೆ ಸಾಲದು ಸಮಾಜದಲ್ಲಿ ಬದುಕುವ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಾಧನೆ ಮಾಡುವ ಛಲ ಇರುವ ವಿದ್ಯಾರ್ಥಿಗೆ ಯಾವುದೇ ಸವಾಲು ಕಠಿಣ ಎನಿಸುವುದಿಲ್ಲ ಎಂದರು.
ಶಿಕ್ಷಣ ಸಂಸ್ಥೆ ಮುಖ್ಯಸ್ಥ ನಾಗರಾಜ ಪಾಟೀಲ್, ಆಡಳಿತಾಧಿಕಾರಿ ವೆಂಕಟೇಶ ನೀಲಗಲ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಬಂದೇನವಾಜ್ ನಾಗಡದಿನ್ನಿ, ಪ್ರಾಚಾರ್ಯ ಶಿವಗ್ಯಾನಿ, ಶಿವಲಿಂಗಯ್ಯ ಮಠಪತಿ ಇತರರಿದ್ದರು.