ವಿದ್ಯಾತ್ಮಶ್ರೀ ವೃಂದಾವನಸ್ಥ

ಕಲಬುರಗಿ,ಮೇ 20: ಪ್ರಯಾಗ ಮಧ್ವ ಮಠದ ಯತಿಗಳಾಗಿದ್ದ ವಿದ್ಯಾತ್ಮತೀರ್ಥ ಶ್ರೀಪಾದಂಗಳವರು ಶುಕ್ರವಾರ ಪ್ರಯಾಗದಲ್ಲಿ ವೃಂದಾವನಸ್ಥರಾದರು (ಹರಿಪಾದ ಸೇರಿದರು). ಅವರು 96 ವರ್ಷ ಪೂರೈಸಿದ್ದರು.
ಪ್ರಯಾಗದಲ್ಲಿ ಮಧ್ವ ಮಠದ ಜವಾಬ್ದಾರಿ ನಿಭಾಯಿಸುತ್ತ ಉತ್ತರ ಭಾರತದಲ್ಲಿ ಮಧ್ವ ಸಿದ್ಧಾಂತದ ಪ್ರಚಾರವನ್ನು ಶ್ರದ್ಧೆ, ಭಕ್ತಿಪೂರ್ವಕ ಕೈಗೊಂಡ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.ಶ್ರೀಗಳು ಕಲಬುರಗಿ ನಗರದಲ್ಲಿ ಹಿರಿಯ ವಕೀಲರಾಗಿದ್ದ ನವಲಿ ಕೃಷ್ಣಾಚಾರ್ಯ ಅವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡು 40 ದಿನಗಳವರೆಗೆ ಭಕ್ತರಿಗೆ ಜ್ಞಾನಧಾರೆ ಎರೆದಿದ್ದರು. ಶ್ರೀಗಳು ಜಿಲ್ಲೆಯೊಂದಿಗೆ ಅನನ್ಯ ನಂಟು ಹೊಂದಿದ್ದರು. ಹಿಂದೂ ಧರ್ಮದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಕಳೆದ 24 ವರ್ಷದಿಂದ ಯತ್ಯಾಶ್ರಮದಲ್ಲಿದ್ದು, ಮಧ್ವ ಸಿದ್ಧಾಂತ ಪ್ರಚಾರ ಮಾಡಿದ್ದಾರೆ. ಮಧ್ವ ಸಿದ್ಧಾಂತದ ಅನೇಕ ಗ್ರಂಥಗಳನ್ನು ಹಿಂದಿಯಲ್ಲಿ ಅನುವಾದ ಮಾಡುವ ಮೂಲಕ ಆ ಭಾಗದ ಭಕ್ತರಿಗೆ ಮಧ್ವ ಸಿದ್ಧಾಂತದ ಪರಿಚಯ ಮಾಡಿಸುವಲ್ಲಿ ಶ್ರಮ ವಹಿಸಿದ್ದಾರೆ.ಶ್ರೀಗಳು ಹರಿಪಾದ ಸೇರಿದ್ದಕ್ಕೆ ಕಲಬುರಗಿಯ ಭಕ್ತರು ಕಂಬನಿ ಮಿಡಿದ್ದಾರೆ. ಪ್ರಮುಖರಾದ ಪಂ. ಹಣಮಂತಾಚಾರ್ಯ ಸರಡಗಿ, ರಾಮಾಚಾರ್ಯ ಘಂಟಿ, ರವಿ ಲಾತೂರಕರ, ವ್ಯಾಸರಾಜ ಸಂತೆಕೆಲ್ಲೂರ, ಡಾ. ಗುರುರಾಜ ನವಲಿ, ರಾಮಚಂದ್ರ ನವಲಿ ವಕೀಲರು, ನರೇಂದ್ರ ಫಿರೋಜಾಬಾದ,ಮಲ್ಹಾರರಾವ ಕುಲಕರ್ಣಿ ಗಾರಂಪಳ್ಳಿ,ರಾಘವೇಂದ್ರ ವಕೀಲ ಅವರು ಸೇರಿದಂತೆ ಅನೇಕರು ಕಂಬಿನಿ ಮಿಡಿದಿದ್ದಾರೆ.