ವಿದ್ಯಾಗಮ 2021 : ಜಂಟಿ ನಿರ್ದೇಶಕರ ಪರಿಶೀಲನೆ: ಭಾಲ್ಕಿಯ ಪ್ರೌಢಶಾಲೆಗಳ ಸಿದ್ದತೆ ಬಗ್ಗೆ ಮೆಚ್ಚುಗೆ

ಭಾಲ್ಕಿ : ಜ.02: ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯೂ ವಿದ್ಯಾರ್ಥಿಗಳ ತರಗತಿ ಪ್ರಾರಂಭ ಮತ್ತು 6 ರಿಂದ 9 ನೇ ತರಗತಿಯ ವರೆಗಿನ ವಿದ್ಯಾಗಮ 2021ನೇ ಪ್ರಾರಂಭೋತ್ಸವ ನಿಮಿತ್ಯ ಗುರುವಾರ ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಆಯುಕ್ತಾಲಯದ ಜಂಟಿ ನಿರ್ದೇಶಕ ವಿಜಯಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊರೋನಾ ಹೊಡೆದೋಡಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಎಸ್.ಓ.ಪಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಶಾಲಾ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳ ಸಾಮಾಜಿ ಅಂತರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಶಾಲೆಯೇ ಸುರಕ್ಷಿತ ಎನ್ನುವ ರೀತಿಯಲ್ಲಿ, ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಭಾಲ್ಕಿಯ ಎಲ್ಲಾ ಪ್ರೌಢಶಾಲೆಗಳಲ್ಲಿಯೂ ಉತ್ತಮವಾದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಇಸಿಓ ಸಹದೇವ.ಜಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.