ವಿದ್ಯಾಗಮ ಯೋಜನೆ ಸದುಪಯೋಗಪಡಿಸಿಕೊಳ್ಳಿ-ಕಣಗಲಭಾವಿ

ಬ್ಯಾಡಗಿ: ಕೋವಿಡ್- 19 ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆಯ ಕಲಿಕೆಯಿಂದ ದೂರವಾಗವಾಗಬಾರದೆಂಬ ಸದುದ್ದೇಶದಿಂದ ಶಿಕ್ಷಣ ಇಲಾಖೆಯು ಜಾರಿ ತಂದಿರುವ ವಿದ್ಯಾಗಮ ಯೋಜನೆಯನ್ನು ಪಾಲಕರು ಸದುಪಯೋಗ ಪಡೆದುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಜಗದೀಶ ಕಣಗಲಭಾವಿ ಹೇಳಿದರು.
ತಾಲೂಕಿನ ದುಮ್ಮಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಟೆಕ್ಸಾಸ್ ಇನ್ಸ್ತ್ರೂಮೆಂಟ್ ವತಿಯಿಂದ ಚಿಕ್ಕಬಾಸೂರ ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ಕಿಟ್’ಗಳನ್ನು ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬರುತ್ತಿರುವ ಶಿಕ್ಷಕರು ಮಕ್ಕಳಿಗೆ ಪಾಠ ಪ್ರವಚನ ಮಾಡುವ ಮೂಲಕ ಮಕ್ಕಳು ವಿದ್ಯೆಯಿಂದ ದೂರವಾಗದಂತೆ ಸೇತುವೆಯಾಗಿ ವಿದ್ಯಾಗಮ ಯೋಜನೆಗೆ ಕೋವಿಡ್ ಆತಂಕದ ನಡುವೆಯೂ ಕೈಜೋಡಿಸಿದ್ದು, ಈ ಯೋಜನೆಯ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದರು.
ಮುಖ್ಯ ಶಿಕ್ಷಕ ಎಂ.ಎಸ್. ದಂಡಗಿ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬಿಸಿಯೂಟದ ರೇಶನ್, ಕ್ಷೀರಭಾಗ್ಯದ ಹಾಲಿನ ಪುಡಿಯನ್ನು ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ನಿರಂತರ ವಿದ್ಯಾಕಲಿಕೆಯಲ್ಲಿ ತೊಡಗುವಂತೆ ಮಾಡಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಶಿಕ್ಷಕರು ಸಹ ಬಹಳಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಾ ಪಂ. ಸದಸ್ಯ ಶಾಂತಣ್ಣ ದೊಡ್ಡಮನಿ, ಚಂದ್ರಪ್ಪ ಸವದತ್ತಿ, ಮಂಜಣ್ಣ ಅಂಗರಗಟ್ಟಿ, ಬಸವರಾಜ ಬೆಲ್ಲದ, ಷಣ್ಮುಖ ನವಲಿ, ಚಂದ್ರಪ್ಪ ಮಾಲಾಪೂರ, ನಿರ್ಮಲಾ ಹಾವೇರಿ ಮತ್ತು ಶಾಲಾ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.