ವಿದ್ಯಾಗಮ ಯೋಜನೆ ತರಗತಿಗೆ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತ

ದಾವಣಗೆರೆ.ಜ.೧; : ಕೊರೊನಾ ವಿಷಮ ಸ್ಥಿತಿಗೆಬಲಿಯಾಗಿದ್ದ ಶಾಲೆ ಶಿಕ್ಷಣವು ಆರಂಭವಾಗುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಂತಸತಂದಿದೆ ಎಂದು ಸಾರ್ವಜನಿಕ ಶಿಕ್ಷಣ ವೇದಿಕೆ ಮುಖಂಡ ಆರ್ ಪರಮೇಶ್ವರಪ್ಪ ಹೇಳಿದರು.ನಗರದ ಅಣ್ಣಾನಗರದಲ್ಲಿರುವ ರೇವಣಸಿದ್ದೇಶ್ವರ ಅನುದಾನಿತ ಶಾಲೆಯಲ್ಲಿ ವಿದ್ಯಾಗಮ ತರಗತಿ ಬೋಧನೆ ಹಾಗೂ ಶಾಲೆ ಆರಂಭಕ್ಕೆ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಮಾತನಾಡಿದರು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಪರ್ಕ ಮತ್ತು ಕಲಿಕೆಗೆ ಅನುಕೂಲವಾಗಿದ್ದ ಸರಕಾರದ ವಿದ್ಯಾಗಮ ಯೋಜನೆ ವಠಾರಶಾಲೆ ಸ್ಥಗಿತದಿಂದ ಗ್ರಾಮೀಣ, ಕೊಳಚೆ ಪ್ರದೇಶ ಹಾಗೂ ಬಡವರ್ಗದ ಮಕ್ಕಳಿಗೆ ತೀವ್ರ ವಂಚನೆಯಾಗಿತ್ತು. ಆನ್‌ಲೈನ್ ಹಾಗೂ ಮೊಬೈಲ್ ಮೂಲಕ ಶಿಕ್ಷಣ ಮುಂದುವರೆಸುವುದು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಕ್ಕಳು ಶಿಕ್ಷಣದಿಂದ ದೂರವಾಗುವ ಆತಂಕ ಎದುರಾಗಿತ್ತು. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಪರ್ಕದಿಂದ ಮಕ್ಕಳಲ್ಲಿ ಶಿಕ್ಷಣ ಮುಂದುವರಿಕೆಗೆ ಅವಕಾಶವೇ ಹೊರತು ಆನ್‌ಲೈನ್ ಪದ್ಧತಿಯಿಂದ ಆಗುವುದಿಲ್ಲ ಎಂದರು.ವಿದ್ಯಾಗಮ ಯೋಜನೆ ಮುಂದುವರಿಯಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯತೆ ನಿರಂತರವಾಗಿ ಸಿಗುವಂತಾಗಬೇಕು. ಶಾಲೆ ವಿದ್ಯಾರ್ಥಿಗಳಿಗೆ ಶಾಲೆ ಶಿಕ್ಷಣ ಸಿಗುವಂತಾಗಬೇಕು ಎಂಬ ಕುರಿತು ರಾಜ್ಯದಲ್ಲಿ ಎಸ್‌ಡಿಎಂಸಿ ಸಮನ್ಯಯವೇದಿಕೆ ಸೇರಿದಂತೆ ಸಾರ್ವಜನಿಕ ಶಿಕ್ಷಣ ಪರಸಂಘಟನೆಗಳವತಿಯಿಂದ ಸರಕಾರದ  ನಿರಂತರ ಸಂಪರ್ಕ ಮತ್ತು ಒತ್ತಾಯದ ಹೋರಾಟದ ಫಲದಿಂದಾಗಿ ಮತ್ತೆ ವಿದ್ಯಾಗಮ ಶಾಲೆ ಆವರಣದಲ್ಲೆ ಪುನರಾರಂಭವಾದಂತಾಗಿದೆ. ಈ ಸಂಬಂಧ ಸರಕಾರಕ್ಕೆ ಅಭಿನಂದಿಸುವುದಾಗಿ ಹೇಳಿದರು.3 ಮತ್ತು4 ಚಕ್ರಗಳ ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಪಳನಿಸ್ವಾಮಿ ಪೋಷಕರ ಸಭೆಯಲ್ಲಿ ಮಾತನಾಡಿ, ಯಾವುದೇ ಆತಂಕವಿಲ್ಲದೆ ಪೋಷಕರು ಸ್ವಚ್ಛತೆ ಗಮನಿಸುವ ಮೂಲಕ ನಿತ್ಯ ಮಕ್ಕಳನ್ನು ಶಾಲೆಗೆ ಕಳಿಸಸಲು ಹಿಂಜರಿಯಬಾರದು ಎಂದರು.ಮುಖ್ಯ ಶಿಕ್ಷಕಿ ಕೆ.ಜಿ.ಸೌಭಾಗ್ಯಮ್ಮ ವಿದ್ಯಾರ್ಥಿಗಳು ನಿರ್ಭೀತಿಯಿಂದ ಶಾಲೆಗೆ ಬರುವುದನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಂತೆ ವಿದ್ಯಾಭ್ಯಾಸ ಮುಂದುವರೆಸಬೇಕು ಎಂದರು.ಸುವರ್ಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ಸಂತೋಷ್‌ಕುಮಾರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಜಿ. ಕಲ್ಲೇಶಪ್ಪ, ಶಿಕ್ಷಕರಾದ ನಾಗೇಂದ್ರಯ್ಯ, ಜಿ.ಎನ್.ರಾಜೇಶ್, ಜಯಪ್ರಕಾಶ್, ಪರಮೇಶ್ವರ್ ಕುರುವತ್ತಿ, ಶೋಭಾರಾಣಿ, ನಾಗರಾಜ್, ಶಂಕರ್ ಗೌಡ, ಸಂಘದ ಮಾನಪ್ಪ ಸೇರಿದಂತೆ ಅಣ್ಯಾನಗರದ ಸ್ಥಳೀಯರು ಮತ್ತು ಶಾಲೆ ಪೋಷಕರು ಭಾಗವಹಿಸಿದ್ದರು.