ವಿದ್ಯಾಗಮದಲ್ಲಿಯ ಒಂದು ತಂಡದಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ

ಭಾಲ್ಕಿ:ಡಿ.28: ಕೊರೋನಾ ಹಿನ್ನಲೆಯಲ್ಲಿ ಶಾಲೆ ಪ್ರಾರಂಭವಾಗದೇ ಇರುವುದರಿಂದ ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖೆ ಮತ್ತು ಬಾಲ್ಯ ವಿವಾಹ ಹೆಚ್ಚುತ್ತಿರುವ ಸಂಭವ ಗಮನಿಸಿ, ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ 2021ರ ಜನವರಿ 1 ರಿಂದ ಶಾಲಾ ಆವರಣದಲ್ಲಿ ವಿದ್ಯಾಗಮ ನಡೆಸಲಾಗುವುದು ಎಂದು ಬಿಆರ್‍ಪಿ ಆನಂದ ಹಳಂಬರೆ ಹೇಳಿದರು.

ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ರವರ ಮಾರ್ಗದರ್ಶನದಲ್ಲಿ ಶನಿವಾರ ಅಯೋಜಿಸಿದ್ದ ಖಟಚಿಂಚೋಳಿ ವಲಯದ ಮೊರಂಬಿ, ಕಲವಾಡಿ, ವರವಟ್ಟಿ(ಬಿ) ಮತ್ತು ಖಟಕಚಿಂಚೋಳಿ ಕ್ಲಸ್ಟರ ಮಟ್ಟದ ಮುಖ್ಯ ಶಿಕ್ಷಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಎಲ್ಲಾ ವಲಯಗಳಲ್ಲಿಯೂ ಆಯಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಮುಖ್ಯಸ್ಥಿಕೆಯಲ್ಲಿ ಮುಖ್ಯಗುರುಗಳ ಸಭೆ ಆಯೋಜಿಸಲಾಗಿದೆ. ಸುಮಾರು ದಿವಸಗಳಿಂದ ಕೋವಿಡ್ 19 ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗಿಲ್ಲ. ಆದರೆ ಸರ್ಕಾರ ಇವಾಗ ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಪರಿಗಣಿಸಿ ಶಾಲೆಗೆ ಬನ್ನಿ ಮಕ್ಕಳೇ, ಮಹಾಮಾರಿ ಓಡಿಸೋಣ, ಮಕ್ಕಳನ್ನು ಓದಿಸೋಣ ಎನ್ನುವ ಧೇಯ ವಾಕ್ಯದೊಂದಿಗೆ 2021 ರ ಜನೆವರಿ 1 ರಿಂದ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಮುಖ್ಯ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಈ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಖಟಕಚಿಂಚೋಳಿ ಕ್ಲಸ್ಟರ್ ಸಿಆರ್‍ಪಿ ವಿಜಯಕುಮಾರ ಮಾತನಾಡಿ, ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕರನ್ನು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಮೆಂಟರ್ ಆಗಿ ನೇಮಿಸಬೇಕು ಎಂದು ಹೇಳಿದರು.

ಮೊರಂಬಿ ಸಿಆರ್‍ಪಿ ಸಂತೋಷ ವಾಡೆ ಮಾತನಾಡಿ, ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರುವಂತೆ ಸೂಚಿಸಬೇಕು. ಒಂದು ವೇಳೆ ತರದೇ ಇದ್ದಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಪ್ರಾಥಮಿಕ ಹಂತದಲ್ಲಿ 6 ರಿಂದ 8 ಮತ್ತು ಪ್ರೌಢ ಹಂತದಲ್ಲಿ 8 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ನಡೆಸಬೇಕು. 10ನೆ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಬೋರ್ಡ ಪರೀಕ್ಷೆ ಎದುರಿಸಬೇಕಾಗಿರುವುದರಿಂದ ಪೂರ್ಣ ಪ್ರಮಾಣದ ಪಾಠ ನಡೆಸಬೇಕು. ಪ್ರತಿ ತಂಡದಲ್ಲಿಯೂ 15 ವಿದ್ಯಾರ್ಥಿಗಳು ಮಾತ್ರ ಇರುವಂತೆ ನೋಡಿಕೊಂಡು ತಂಡ ರಚಿಸ ಬೇಕು ಎಂದು ಹೇಳಿದರು.

ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಷಡಕ್ಷರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಕಾಂಬಳೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ, ಸಿಆರ್‍ಪಿ ಜೀವನ ಬೇಂದ್ರೆ, ಸಿಆರ್‍ಪಿ ಸೋಮನಾಥ ಮೂಲಗೆ ಉಪಸ್ಥಿತರಿದ್ದರು.