ವಿದ್ಯಾಕ್ಷೇತ್ರವನ್ನು ಬಂದ್ ಮಾಡುವುದನ್ನು ನಾವು ಒಪ್ಪುವುದಿಲ್ಲ?

ಉಡುಪಿ, ಎ.೫- ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಯನ್ನು ಬಂದ್ ಮಾಡುವ ಸರಕಾರ, ರೋಗ ನಿರೋಧಕ ಶಕ್ತಿಯೇ ಇಲ್ಲದವರು ಬಳಸುವ ಮದ್ಯದಂಗಡಿ, ಬೀಚ್‌ಗಳಲ್ಲಿನ ಮೋಜು, ಸಭೆ ಸಮಾರಂಭಗಳಲ್ಲಿ ಜನಸ್ತೋಮ, ರಾಜಕಾರಣಿಗಳ ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ಯಾವುದೇ ಕಡಿವಾಣ ಹಾಕುತ್ತಿಲ್ಲ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಶ್ನಿಸಿದ್ದಾರೆ.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ‘ಸಂಸ್ಕೃತಿ ಉತ್ಸವ’ದಲ್ಲಿ ರವಿವಾರ ವಿಶ್ವಪ್ರಭಾ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಸೋಂಕು ಪೀಡಿತರು ಗುಣಮುಖರಾಗುತ್ತಿದ್ದಾರೆ. ಇದಕ್ಕೆ ವೈದ್ಯ ಲೋಕ ಮಾನವೀಯತೆಯ ನೆಲೆಯಲ್ಲಿ ಚಿಕಿತ್ಸೆ ನೀಡಬೇಕು. ಕೊರೋನ ಚಿಕಿತ್ಸೆ, ಮೃತ ದೇಹ ಅಂತ್ಯಕ್ರಿಯೆಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇಂತಹ ಸಂದರ್ಭದಲ್ಲಿ ವಿದ್ಯಾ ಕ್ಷೇತ್ರವನ್ನು ಬಂದ್ ಮಾಡುವುದನ್ನು ನಾವು ಒಪ್ಪುವುದಿಲ್ಲ. ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಇರುವವರು ವಿದ್ಯಾರ್ಥಿಗಳು ಕೊರೋನ ಸೋಂಕು ಎದುರಿಸಿ ಗುಣಪಡಿಸುವಂತೆ ಮಾಡಬೇಕು ಎಂದರು. ಸರಕಾರದ ಕ್ರಮದಿಂದ ಎಲ್ಲ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಅನುಭವಿಸುತ್ತಿದೆ. ಇದರಿಂದ ರಾಜ್ಯದಲ್ಲಿರುವ ಒಂದು ಕೋಟಿ ವಿದ್ಯಾರ್ಥಿಗಳು ಸರಿಯಾದ ಶಿಕ್ಷಣ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾಭ್ಯಾಸ ಸರಿಯಾಗಿ ಸಿಗದಿದ್ದರೆ ಮಕ್ಕಳ ಮುಂದಿನ ಭವಿಷ್ಯವೇ ತೊಂದರೆ ಸಿಲುಕಲಿದೆ ಎಂದು ಅವರು ತಿಳಿಸಿದರು. ಕೇಂದ್ರ, ರಾಜ್ಯ ಸರಕಾರಗಳು ಹಾಗೂ ರಾಜ ಕಾರಣಿಗಳು ಇಂದು ಮನಸ್ಸು ಗಳನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ. ಅವರಿಗೆ ಓಟು ಮುಖ್ಯವೇ ಹೊರತು ಜನರಲ್ಲ. ಆದುದರಿಂದ ಖಾಸಗಿ ಚಿಂತನೆಯ ಮೂಲಕ ನಾವೇ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ಖಾಸಗಿ ಚಿಂತನೆ ಎಂಬುದು ಜನರ ರಕ್ತ ಹೀರುವ ತಿಗಣೆ ಯಾಗಿರದೆ ಸಮಾಜದ ಜೊತೆ ಇರಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ನಾವು ವಿದ್ಯಾವಂತರು, ಐಶ್ವರ್ಯವಂತರಾದರೂ ಇಂದಿಗೂ ಧರ್ಮ, ಮತ, ಜಾತಿಗಳ ನಡುವಿನ ವ್ಯಾತ್ಯಾಸವನ್ನು ಅರಿತಿಲ್ಲ. ಅದರ ಮಧ್ಯೆ ಕಂದಕಗಳೇ ಸೃಷ್ಠಿ ಯಾಗುತ್ತಿದೆ. ಈ ಜಗತ್ತಿನಲ್ಲಿ ಇರುವುದು ಒಂದೇ ಧರ್ಮ. ಅದರ ತಿರುಳು ಗಳನ್ನು ಬೇರೆ ಬೇರೆ ಪ್ರತಿಪಾದಕರು ಪ್ರಚಾರ ಮಾಡಿ ಮತಗಳಾಗಿವೆ. ಎಲ್ಲ ಜಾತಿಗಳು ಸೇರಿ ಸಮಾಜ ಆಗುವಂತೆ, ಎಲ್ಲ ಮತಗಳು ಸೇರಿ ಧರ್ಮ ಆಗು ತ್ತದೆ. ಇಂದು ಸಮಾಜದಲ್ಲಿ ಜಾತಿಗಳನ್ನು ವೈಭವೀಕರಿಸಲಾಗುತ್ತಿದೆ. ಕಲೆ ಮತ್ತು ಕ್ರೀಡೆಯನ್ನು ಕೂಡ ಜಾತಿಗೆ ಸೀಮಿತ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು. ಕೊರೋನ ಸೋಂಕು ಇಡೀ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇದೊಂದು ಸಾಮಾನ್ಯವಾದ ಸೋಂಕು. ಈ ವಿಶ್ವದಲ್ಲಿ ಮನುಷ್ಯರು, ಪ್ರಾಣಿಗಳು ಸೇರಿದಂತೆ ಜೀವ ಸಂಕುಲಗಳು ಇರುವವರೆಗೂ ಈ ಸೋಂಕು ಇದ್ದೆ ಇರುತ್ತದೆ. ಇಂತಹ ರೋಗದ ಲಕ್ಷಣಗಳು ನಮ್ಮ ಜೀವನದಲ್ಲಿ ಸಾಕಷ್ಟು ಬಾರಿ ಕಂಡಿದ್ದೇವೆ. ಆದರೂ ಇಂದು ನಾವು ಇದಕ್ಕೆ ಯಾಕಾಗಿ ಹೆದರಬೇಕು ಎಂಬುದು ಅರ್ಥ ಆಗುತ್ತಿಲ್ಲ. ನಮ್ಮ ಮುಂದೆ ಬಂದು ಹೋದ ಅಸಂಖ್ಯಾತ ಕಾಯಿಲೆಗಳ ಎದುರು ಇದೊಂದು ಸಾಮಾನ್ಯ ಸೋಂಕು ಆಗಿದೆ ಎಂದು ಡಾ.ಮೋಹನ್ ಆಳ್ವ ತಿಳಿಸಿದರು. ಅಧ್ಯಕ್ಷತೆಯನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ವಹಿಸಿದ್ದರು. ತುಳುಕೂಟ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಶಿವಮೊಗ್ಗ ರಂಗಾ ಯಣ ನಿರ್ದೇಶಕ ಸಂದೇಶ್ ಜವಳಿ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಪ್ರಭಾವತಿ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು. ವಿಶ್ವಪ್ರಭ ಪುರಸ್ಕಾರ ಸಮಿತಿ ಸಂಚಾಲಕ ನಾಗರಾಜ್ ಹೆಬ್ಬಾರ್ ಸ್ವಾಗತಿಸಿ ದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿವಮೊಗ್ಗ ರಂಗಾಯಣದಿಂದ ‘ಹಕ್ಕಿ ಕಥೆ’ ಮಕ್ಕಳ ಪಪ್ಪೆಟ್ ನಾಟಕ ಪ್ರದರ್ಶನಗೊಂಡಿತು.