ವಿದೇಶಿ ಮಹಿಳೆ ಬಂಧನ ಗಾಂಜಾ ವಶ

ಬೆಂಗಳೂರು,ಜು.೧೦-ನಗರದಲ್ಲಿ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಂಧಿಸಿ ಆಕೆಯಿಂದ ೪ ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಜು.೮ರಂದು ಸಂಪಿಗೆಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ವಿದೇಶಿ ಪ್ರಜೆಯೊಬ್ಬರ ಬ್ಯಾಗ್‌ನಲ್ಲಿ ೧.೪ ಕೆಜಿ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ೭೫,೦೦೦ ರೂ.ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ವೀಸಾ ಅವಧಿ ಮುಗಿದ ಬಳಿಕ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯಿಂದ ೧.೩೫ ಲಕ್ಷ ಮೌಲ್ಯದ ೨.೭ ಕೆಜಿ ಮಾದಕ ದ್ರವ್ಯ ಗಾಂಜಾ ಮತ್ತು ೨.೧೦ ಲಕ್ಷ ಮೌಲ್ಯದ ೧೦೫ ಗ್ರಾಂ ಎಂಡಿಎಂಎ, ಒಟ್ಟು ೩.೪೫ ಲಕ್ಷ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.