ವಿದೇಶಿ ಬಂಡವಾಳ ಹೂಡಿಕೆದೇಶದಲ್ಲೇ ಕರ್ನಾಟಕ ಪ್ರಥಮ

ಬೆಂಗಳೂರು, ಸೆ. ೨೩- ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ ೭೫ ನೇ ಸ್ವಾತಂತ್ರ್ಯದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕ ಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ ತಾಣವಾಗಿದೆ. ರಾಜ್ಯಕ್ಕೆ ಬರುವ ಉದ್ಯಮಿಗಳಿಗೆ ಅತ್ಯುತ್ತಮವಾದ ಹಾಗೂ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ರಾಜ್ಯದಲ್ಲಿರುವ ಅವಕಾಶಗಳನ್ನು ತೆರೆದಿಟ್ಟರು.
“ಭಾರತದ ಮೂರು ಮಹಾನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸುವ ಮೂರು ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳನ್ನು ಹೊಂದಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC) ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ (BMEC) ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ (HBIC)ಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ(NICDC) ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
ಕಳೆದ ದಶಕದಲ್ಲಿ ಶೇ. ೭.೦೯ ಜಿಎಸ್‌ಡಿಪಿ ಯೊಂದಿಗೆ ಕರ್ನಾಟಕವು ಭಾರತದ ೪ ನೇ ಅತಿದೊಡ್ಡ ಆರ್ಥಿಕತೆಯ ರಾಜ್ಯವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
೨೦೨೦- ೨೧ ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲೇ ‘ವಿದೇಶಿ ನೇರ ಬಂಡವಾಳ ಹೂಡಿಕೆ’ ಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದರಿಂದಾಗಿ ರಾಜ್ಯದಲ್ಲಿ ಇನ್ನಷ್ಟು ದೊಡ್ಡ ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಲು ಮುಂದೆ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ತಲಾ ಆದಾಯವು ೫ ನೇ ಸ್ಥಾನದಲ್ಲಿದೆ ಎಂದರು.
ಕಳೆದ ೫೦ ವರ್ಷಗಳಲ್ಲಿ ಕರ್ನಾಟಕವು ಭಾರತದ ಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ. ೪೦೦ ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ನೆಲೆಯಾಗಿದೆ. “ಇದು ನಮಗೆ ೭೫ ವರ್ಷಗಳ ಹೆಮ್ಮೆಯ ಪ್ರಯಾಣವಾಗಿದೆ” ಎಂದು ಹೇಳಿದರು.
೭೦೦ ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಜಾಗತಿಕ ಫಾರ್ಚೂನ್ ೫೦೦ ಕಂಪನಿಗಳನ್ನು ಒಳಗೊಂಡಂತೆ ಕರ್ನಾಟಕವನ್ನು ತಮ್ಮ ಪ್ರಮುಖ ಹೂಡಿಕೆ ಪ್ರದೇಶವಾಗಿ ಬೆಂಗಳೂರಿನ ಸುತ್ತ ಕೇಂದ್ರೀಕರಿಸಿ ವಿಶ್ವದ ೪ ನೇ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಟರ್ ಆಗಿ ಮಾಡಿವೆ. ರಾಜ್ಯದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಇದು ಕಾರಣೀಭೂತವಾಗಿದೆ ಎಂದು ವಿವರಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರವನ್ನು ವಿವರಿಸಿದ ಸಚಿವ ನಿರಾಣಿ ಅವರು, ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ.ಎನ್. ಶಿವಶಂಕರ್, ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.