ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ಉತ್ತಮ ತಾಣ: ಕೇಶವ

ತುಮಕೂರು, ಏ. ೧೦- ಅತ್ಯಂತ ಸಂಕಷ್ಟದ ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ದಿನಗಳಲ್ಲೂ ಭಾರತ ವಿದೇಶ ನೇರ ಬಂಡವಾಳ ಹೂಡಿಕೆಗೆ ಉತ್ತಮ ತಾಣವಾಗಿ ಬೆಳವಣಿಗೆ ಕಂಡಿದ್ದು, ಹೊರಗಿನ ಹೂಡಿಕೆದಾರರು ಭಾರತದ ಆರ್ಥಿಕ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಅಂಕಿ-ಅಂಶಗಳ ಮೂಲಕ ಪರಿಶೀಲಿಸಿಯೇ ನಿರ್ಧಾರ ಕೈಗೊಂಡಿರುತ್ತಾರೆ. ಮುಂದಿನ ದಿನಗಳಲ್ಲಿ ತನ್ನೆಲ್ಲಾ ಇತಿಮಿತಿಗಳ ನಡುವೆಯೂ ದೇಶ ತನ್ನ ಅಂತಃಸತ್ವದಿಂದ ಸಬಲವಾದ ಆರ್ಥಿಕ ಮತ್ತು ಸೇನಾಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರ ಇಲಾಖೆಯ ಮಾಜಿ ಸಹಾಯಕ ನಿರ್ದೇಶಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ. ಕೇಶವ ಹೇಳಿದರು.
ನಗರದ ಸಿರಾರಸ್ತೆಯ ಶ್ರೀದೇವಿ ಇಂಜೀನಿಯರಿಂಗ್ ಕಾಲೇಜಿನಲ್ಲಿ ಎಂ.ಬಿ.ಎ. ವಿಭಾಗದ ವತಿಯಿಂದ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ಟ್ಯಾಟಿಸ್ಟಿಕ್ಸ್ ಫಾರ್ ಮ್ಯಾನೇಜ್‌ಮೆಂಟ್ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕಾದಾಗ ಅಂಕಿ-ಅಂಶಗಳ ಮೇಲೆಯೇ ಅವಲಂಬಿತರಾಗಿ ದೃಢವಾದ ಶ್ರದ್ಧೆಯಿಂದ ವಿಶ್ಲೇಷಣೆ ಮಾಡಿ ಹಿಂದಿನ ನ್ಯೂನತೆಗಾಗಿ ಬೆಳಕಿನಲ್ಲಿ ಮುಂದುವರೆದರೆ ಯಶಸ್ಸು, ಕೈಗಾರಿಕೆ, ವಾಣಿಜ್ಯ, ಆಡಳಿತ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕಟ್ಟಿಟ್ಟಬುತ್ತಿ. ಯಾವುದೋ ಒಂದು ನಿರ್ದಿಷ್ಟ ಘಟನೆಯ ಮೇಲೆ ಎಂದು ಅವಲಂಬಿತರಾಗದೆ ತನ್ನ ಮಿತಿಯೊಳಗಡೆ ಯೋಚಿಸಿ ನಂತರ ಮಿತಿ ಬಂಧಗಳ ಮೀರಿ ಬದುಲಿಗೆ ಬಂದಲ್ಲಿ ಹಿನ್ನೆಡೆಗಳು ಎಂದೂ ಕಾಡವು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್. ಪಾಟೀಲ್ ಮಾತನಾಡಿ, ಎಂ.ಬಿ.ಎ. ಪದವೀಧರರು ಎಲ್ಲೆಡೆಯೂ ಹೆಚ್ಚಿನ ವೇತನದಾರರಾಗಿದ್ದಾರೆ ಹಾಗೂ ಹೆಚ್ಚಿನ ಮಟ್ಟಿಗೆ ಉದ್ಯಮಿಗಳಾಗಿ ದೇಶದ ಆರ್ಥಿಕ ಶಕ್ತಿಯ ಬೆನ್ನೆಲುಬಾಗಿದ್ದಾರೆ. ಅವರಿಗೆ ಎಲ್ಲಾ ನಿರ್ಧಾರಗಳನ್ನು ಸಮರ್ಥವಾಗಿ ಕೈಗೊಂಡು ಜಾರಿಗೆ ತರಲು ಸಂಖ್ಯಾಶಾಸ್ತ್ರದ ಅಂಕಿ ಅಂಶಗಳೇ ಆಧಾರವಾಗಿ, ಭವಿಷ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದರು.
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಗುರುತರವಾದ ಹಿನ್ನಡೆಗೊಳಗಾಗಿ ಕುಸಿತ ಕಂಡಿರುವ ಈ ವರ್ಷದಲ್ಲಿ ಸರ್ಕಾರ ಅಂಕಿ ಅಂಶಗಳನ್ನು ಪರಿಶೀಲಿಸಿ ದೇಶದ ಒಟ್ಟು ದೇಶಿಯ ಉತ್ಟಾದನೆ (ಜಿಡಿಪಿ) ಉತ್ತಮಗೊಳಿಸಲು ರೂಪಿಸುತ್ತಿರುವ ಯೋಜನೆಗಳಿಗೆ ಮೂಲ ಮಾಹಿತಿ ಸಂಖ್ಯಾಶಾಸ್ತ್ರದಿಂದಲೇ ಲಭ್ಯವಾಗುತ್ತಿದೆ ಎಂದರು.
ಕೋವಿಡ್ ದೇಶದ ಪ್ರಗತಿಗೆ ಮಾರಕವಾಗಿರುವುದರಿಂದ ಆರ್ಥಿಕ ಹಿನ್ನಡೆಗೆ ನೇರವಾಗಿ ಕಾರಣವಾಗುತ್ತಿರುವುದರಿಂದ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ದೇಶದ ಪ್ರಗತಿಗೆ ಪೂರಕವಾಗಿ ಬೆಂಬಲಿಸುವುದು ಹಾಗೂ ವೈಯುಕ್ತಿಕ ಸ್ವಾಸ್ಥ್ಯದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಕರ್ತವ್ಯ ಎಂದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸಂಖ್ಯಾಶಾಸ್ತ್ರದ ಅಂಕಿ ಅಂಶಗಳ ಮೂಲ ನಿಯಮಗಳಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದು ದೃಷ್ಟಾಂತಗಳಿಂದ ತಿಳಿಸಿ, ಕ್ರೀಡೆ, ಕಲೆ, ವಿಜ್ಞಾನಗಳು ಸಂಖ್ಯಾಶಾಸ್ತ್ರದ ನೆರವಿನಿಂದ ಸತತ ಅಭಿವೃದ್ಧಿ ಹೊಂದಿವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಲಾಗುವುದು ಎಂದು ಹೇಳಿದರು.
ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ರಾಮಕೃಷ್ಣ ಮಾತನಾಡಿ, ಸಂಖ್ಯಾಶಾಸ್ತ್ರ ರಚನಾತ್ಮಕವಾಗಿ ಬಳಕೆಯಾದಲ್ಲಿ ಇತ್ಯಾತ್ಮಕ ಬೆಳವಣಿಗೆಯೆಂದೂ ಉದಾಸೀನವಾದಲ್ಲಿ ನೇತ್ಯಾತ್ಮಕ ಬೆಳವಣಿಗೆಯಾಗಿ ಯಾವುದೇ ಯೋಜನೆಗಳೂ ವಿಫಲವಾಗುವುದು ಶತಸಿದ್ಧ ಎಂದರು.
ಸಮಾರಂಭದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಸಿ. ನಾಗರಾಜು, ಡಾ. ಜಿ. ಮಹೇಶ್‌ಕುಮಾರ್, ಇ.ಇ.ವಿಭಾಗದ ಡಾ.ದೇವಕಿ, ಶ್ರೀದೇವಿ ಎಂ.ಬಿ.ಎ. ವಿಭಾಗದ ಪ್ರೊ.ಬಿ.ಎನ್.ಪ್ರತಾಪ್, ಪ್ರೊ. ನಸೀಬ್, ಪ್ರೊ. ಗ್ರೇಸ್ ಹೇಮಲತಾ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್ ಕುಲಕರ್ಣಿ, ಡಾ. ಎಸ್. ಪನ್ನೀರ್‌ಸೆಲ್ವಂ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.