ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆದ ನೇಪಾಳ

ಕಠ್ಮಂಡು, ನ. ೩- ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಚಾರಣ ಪ್ರಿಯರಿಗೆ ಅವಕಾಶ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿದೆ.
ಮಾರಕ ಕೊರೊನಾ ಸೋಂಕಿನಿಂದಾಗಿ ಕಳೆದ ೭ ತಿಂಗಳಿಂದ ವಿದೇಶಿ ಪ್ರಜೆಗಳಿಗೆ ಚಾರಣಕ್ಕೆ ಅವಕಾಶ ನಿರ್ಬಂಧಿಸಲಾಗಿತ್ತು. ಈಗ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಇದರಿಂದಾಗಿ ವಿದೇಶಿ ಪ್ರಜೆಗಳು ನೇಪಾಳಕ್ಕೆ ಭೇಟಿನೀಡಲು ಅವಕಾಶ ಕಲ್ಪಿಸಿದೆ.
ಪ್ರವಾಸೋದ್ಯಮದಿಂದಲೇ ನೇಪಾಳ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ೮ ಲಕ್ಷ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಲ್ಲಿನ ಬೆಟ್ಟಗುಡ್ಡದಲ್ಲಿ ವಿದೇಶಿಗಳಿಂದ ಆಗಮಿಸುವ ಪ್ರಜೆಗಳು ಚಾರಣ ಮಾಡಲು ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ನೇಪಾಳದಲ್ಲಿರುವ ೧೪ ಅತ್ಯಂತ ಎತ್ತರದ ಪೈಕಿ ೮ ಬೆಟ್ಟಗಳು ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿವೆ. ಹೀಗಾಗಿ ವಿದೇಶಗಳಿಂದ ಪ್ರವಾಸಿಗರು ನೇಪಾಳಕ್ಕೆ ಆಗಮಿಸಿ, ಇಲ್ಲಿನ ಬೆಟ್ಟಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿ ಕೊಳ್ಳುತ್ತಾರೆ.
ನಾವು ಎಲ್ಲರಿಗೂ ಭೇಟಿನೀಡಲು ಅವಕಾಶ ನೀಡಿಲ್ಲ. ಟ್ರಕ್ಕಿಂಗ್ ಮಾಡುವವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ರುದ್ರಸಿಂಗ್ ತಮಾಂಗ್ ತಿಳಿಸಿದ್ದಾರೆ.
ನೇಪಾಳಕ್ಕೆ ಭೇಟಿ ನೀಡುವವರು ಮುಂಚಿತವಾಗಿ ಅನುಮತಿ ಪಡೆದು ಎಲ್ಲಾ ವಿವರಗಳನ್ನು ನೀಡಬೇಕು. ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುವ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ವಿಮೆ ಮಾಡಿಸಿಕೊಂಡಿರಬೇಕು. ಪ್ರವಾಸಿಗರು ತಮ್ಮ ದೇಶದಿಂದ ಹೊರಡುವ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಕಠ್ಮಂಡುವಿನಲ್ಲಿ ಒಂದು ವಾರ ಕ್ವಾರಂಟೈನ್ ಆಗಬೇಕು. ನಂತರ ಬೆಟ್ಟಗುಡ್ಡಗಳಿಗೆ ತೆರಳುವ ಮುನ್ನ ಮತ್ತೊಂದು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.