ವಿದೇಶಿ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್

ಬೆಂಗಳೂರು, ಜ.೧: ದೇಶದೆಲ್ಲೆಡೆ ರೂಪಾಂತರಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಕೋವಿಡ್ ಅಲೆ ಎದುರಿಸಲು ಬಿಬಿಎಂಪಿ ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ಹೊರ ದೇಶಗಳಿಂದ ಬರುವ ಪ್ರಯಾಣಿಕರನ್ನು ೭ ದಿನ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
ಜತೆಗೆ, ಕೋವಿಡ್ ಸ್ಯಾಂಪಲ್ಸ್ ತೆಗೆದುಕೊಂಡು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲು ಮುಂದಾಗಿದೆ.
ಚೀನಾ, ಹಾಂಗ್‌ಕಾಂಗ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ್, ಥೈಲ್ಯಾಂಡ್ ದೇಶಗಳಿಂದ ಬರುವ ಪ್ರತಿ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ.
ಜತೆಗೆ ಈ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಐಸೋಲೇಷನ್‌ಗೆ ಒಳಪಡಿಸುವುದು. ಕೋವಿಡ್ ಸ್ಯಾಂಪಲ್ಸ್ ತೆಗೆದುಕೊಂಡು ಜಿನೋಮ್ ಸೀಕ್ವೆನ್ಸಿಂಗ್‌ಗೆ ರವಾನಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಬೆಂಗಳೂರಿಗೆ ಪ್ರವೇಶಿಸುವ ವಿದೇಶಿ ಪ್ರಯಾಣಿಕರು ಕಡ್ಡಾಯವಾಗಿ ೭ ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕು. ಕ್ವಾರಂಟೈನ್ ಸಮಯದಲ್ಲಿ ಜ್ವರ, ಕೆಮ್ಮು, ಶೀತ, ತಲೆ ನೋವು, ಅತಿಸಾರ ಮತ್ತು ಉಸಿರಾಟದ ತೊಂದರೆ ಜತೆಗೆ ರುಚಿ ಇಲ್ಲದಿರುವುದು, ವಾಸನೆ ಬರದೆ ಇರುವ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ಸೂಚಿಸಲಾಗಿದೆ.
ಪ್ರಮುಖವಾಗಿ ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ಐದು ಎಚ್‌ಐಒಗಳನ್ನು ಬೆಂಗಳೂರಿನ ಕೆಐಎಎಲ್‌ಗೆ ನಿಯೋಜಿಸಿಕೊಳ್ಳಬೇಕೆಂದು ಸೂಚಿಸಲಾಗಿದ್ದು, ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ದೃಶ್ಯ ಕಂಡುಬಂದಿತು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು, ಕೋವಿಡ್ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತಿ ಹೆಚ್ಚು ಪ್ರಯಾಣಿಕರು ಬರುತ್ತಿದ್ದಾರೆ. ಇಲ್ಲಿಯೂ ನಿಗಾ ಇರಿಸಲು ಆರಂಭಿಸಲಾಗುವುದು. ಎರಡು ಡೋಸ್‌ಗಳಲ್ಲಿ ಶೇ.೧೦೦ ರಷ್ಟು ಸಾಧನೆಯಾಗಿದೆ. ಆದರೆ ಅನೇಕರು ಮೂರನೇ ಡೋಸ್ ಪಡೆದಿಲ್ಲ. ಅಂತಹವರು ಮುಂದೆ ಬಂದು ಮೂರನೇ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಚೀನಾ ಹಾಗೂ ಇತರ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ಹಂತದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಹೆಚ್ಚಳ ಮಾಡಿದರೆ ಯಾವ ಹೊಸ ರೂಪಾಂತರಿ ತಳಿಯಿಂದ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂದು ಪತ್ತೆ ಮಾಡಬಹುದಾಗಿದೆ ಎಂದರು.