ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಕಾಯ್ದೆಗೆ ಅಂಗೀಕಾರ

ನವದೆಹಲಿ ಸೆಪ್ಟೆಂಬರ್ 21 ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಕಾಯ್ದೆ_-2020ಕ್ಕೆ ಲೋಕಸಭೆಯಲ್ಲಿಂದು ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಇದಕ್ಕೂ ಮುನ್ನ ಮೋಸದ ಕುರಿತು ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ವಿದೇಶಿ ನಿಧಿಗಳ ಬಳಕೆಯಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ದಕ್ಕೆ ತರುವ ಅಥವಾ ಆಂತರಿಕ ಭದ್ರತೆಗೆ ಅಡಚಣೆ ಉಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ವಿದೇಶಿ ಕೊಡುಗೆಗಳು ಮತ್ತು ಅವುಗಳ ಬಳಕೆಯಲ್ಲಿ ಪಾರದರ್ಶಕತೆ ಪಾರದರ್ಶಕತೆ ತರಲು ಈ ಮಸೂದೆ ಸಹಕಾರಿಯಾಗಲಿದೆ ಎಂದು ಸಚಿವರು ಸದನಕ್ಕೆ ಭರವಸೆ ನೀಡಿದರು.

ದೇಶದಲ್ಲಿನ ಯಾವುದೇ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಂಪನಿಗಳು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವ ಮತ್ತು ಬಳಸಿಕೊಳ್ಳುವ ಕುರಿತು ಇದುವರೆಗೂ ಜಾರಿಯಲ್ಲಿದ್ದ 2010ರ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊಸದಾಗಿ ಮಸೂದೆಯನ್ನು ರೂಪಿಸಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದರು.

ವಿದೇಶಿ ಕೊಡುಗೆಗಳನ್ನು ಪಡೆಯಬಯಸುವ ಸಂಸ್ಥೆಗಳ ಹಾಗೂ ಕಂಪನಿಗಳ ಪದಾಧಿಕಾರಿಗಳು ನಿರ್ದೇಶಕರು ಅಥವಾ ಇನ್ನಿತರ ವ್ಯಕ್ತಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡುವುದು ಅಗತ್ಯವೆಂಬ ಶರತ್ತನ್ನು ವಿಧಿಸಲಾಗಿದೆ.