ವಿದೇಶಾಂಗ ಸಚಿವ ಹುದ್ದೆಯಿಂದಕ್ವಿನ್‌ಗೆ ಖೊಕ್

ಬೀಜಿಂಗ್, ಜು.೨೬- ಕೇವಲ ಏಳು ತಿಂಗಳ ಹಿಂದೆಯಷ್ಟೇ ಚೀನಾ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡು, ಬಳಿಕ ಅಚ್ಚರಿಯ ರೀತಿಯಲ್ಲಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಕ್ವಿನ್ ಗ್ಯಾಂಗ್‌ರನ್ನು ಇದೀಗ ಅಧಿಕಾರದಿಂದ ಕೆಳಗಿಳಿಸಲಾಗಿದ್ದು, ಆ ಜಾಗಕ್ಕೆ ಹಿರಿಯ ಕಮ್ಯುನಿಸ್ಟ್ ನಾಯಕ ವಾಂಗ್ ಹೀ ಅವರನ್ನು ನೇಮಿಸಲಾಗಿದೆ. ಆದರೆ ಕ್ವಿನ್ ಅವರನ್ನು ಅಧಿಕಾರದಿಂದ ಯಾವ ಕಾರಣಕ್ಕೆ ತೆಗೆದು ಹಾಕಿದೆ ಹಾಗೂ ಸದ್ಯ ಅವರು ಎಲ್ಲಿದ್ದಾರೆ ಎಂಬುದಕ್ಕೆ ಚೀನಾ ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ.ಚೀನಾ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕ್ವಿನ್ ಗ್ಯಾಂಗ್ ಅವರು ಅಮೆರಿಕಾದ ಮಹಿಳಾ ಪತ್ರಕರ್ತೆಯ ಜೊತೆ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗಿದೆ. ಇದು ಸದ್ಯ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಕ್ವಿನ್ ಗ್ಯಾಂಗ್ ಕಣ್ಮರೆಯಾಗಿದ್ದು, ಇದೀಗ ಅವರನ್ನು ಅಧಿಕಾರದಿಂದಲೇ ಕೆಳಗಿಳಿಸಲಾಗಿದೆ. ಜೂನ್ ೨೫ರಂದು ಕ್ವಿನ್ ಅವರು ಕೊನೆಯ ಬಾರಿಗೆ ಸ್ವಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಬಳಿಕ ಆಘಾತಕಾರಿ ರೀತಿಯಲ್ಲಿ ನಾಪತ್ತೆಯಾಗಿದ್ದರು. ಎಲ್ಲರಿಗೂ ತಿಳಿದಿರುವಂತೆ ಚೀನಾದಲ್ಲಿ ಸರ್ಕಾರದ ವಿರುದ್ಧ ಅಥವಾ ಕಮ್ಯುನಿಸ್ಟ್ ನೀತಿಗಳ ವಿರುದ್ಧ ಮಾತನಾಡಿದರೆ ಹಠಾತ್ ನಾಪತ್ತೆಯಾಗುವುದು ಸಾಮಾನ್ಯ ಸಂಗತಿಯಾಗಿದ್ದರೂ ಸ್ವತಹ ದೇಶದ ವಿದೇಶಾಂಗ ಸಚಿವರೊಬ್ಬರ ಜೊತೆ ಈ ರೀತಿಯ ಆಗಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.