ವಿದೇಶಾಂಗ ಸಚಿವ ಜೈಶಂಕರ್ ಅಮೆರಿಕ ಭೇಟಿ- ಮಹತ್ವದ ಚರ್ಚೆ

ವಾಷಿಂಗ್ಟನ್, ಮೇ ೨೭: ಕೋವಿಡ್ ಸಂದಿಗ್ಧ ಸಂದರ್ಭದಲ್ಲೂ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಾಷಿಂಗ್ಟನ್ ನಲ್ಲಿ ಅಧ್ಯಕ್ಷ ಜೋ ಬಿಡನ್ ಅವರ ಆಡಳಿತದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಜೋ ಬಿಡನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ೧೦೦ ದಿನಗಳಲ್ಲಿ ಭಾರತ- ಅಮೆರಿಕ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲಿದ್ದು, ಇನ್ನು ಈ ಸಭೆಯು ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಗೆ ಅಡಿಪಾಯವೆಂದು ಹೇಳಲಾಗಿದೆ.
ಮೂರು ದಿನಗಳ ಅಮೆರಿಕ ಭೇಟಿ ವೇಳೆ ಸಚಿವ ಜೈಶಂಕರ್ ಅವರು ಅಮೇರಿಕನ್ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮತ್ತು ಬಿಡೆನ್ ಆಡಳಿತದ ಇತರ ಪ್ರಮುಖ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಭಾರತದ ಮೊದಲ ಕ್ಯಾಬಿನೆಟ್ ಮಟ್ಟದ ವಾಷಿಂಗ್ಟನ್ ಭೇಟಿಯ ಅಂಗವಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿಯು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ನಾಳೆ ಭೇಟಿಯಾಗಲಿದ್ದಾರೆ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆದ ಮಹತ್ವದ ಚರ್ಚೆಗಳು ಅಮೆರಿಕದ ಸಭೆಯಲ್ಲಿ ಮುಂದುವರಿಯಲಿವೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಂಬಂಧ ಚರ್ಚೆ ನಡೆಯಲಿವೆ. ಭಾರತದ ಸಚಿವ ಜೈಶಂಕರ್ ಅವರನ್ನು ಪೆಂಟಗನ್‌ನಲ್ಲಿ ಭೇಟಿಯಾಗಲು ಉತ್ಸುಕರಾಗಿದ್ದೇವೆ ಎಂದು ಕಿರ್ಬಿ ಹೇಳಿದ್ದಾರೆ.
ಭೇಟಿಯ ವೇಳೆ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಲು ಮತ್ತು ಕೋವಿಡ್ ಪರಿಹಾರ ಕ್ರಮ, ಕ್ವಾಡ್ ಮೂಲಕ ಇಂಡೋ-ಪೆಸಿಫಿಕ್ ಸಹಕಾರವನ್ನು ಬಲಪಡಿಸುವ ಪ್ರಯತ್ನ, ಬಹುಪಕ್ಷೀಯ ಇನ್ನಿತರ ವಿಷಯಗಳು ಚರ್ಚೆಗೆ ಬರಲಿವೆ ಎಂದು ತಿಳಿಸಿದ್ದಾರೆ.
೨೦೧೩ ರ ಡಿಸೆಂಬರ್‌ನಿಂದ ೨೦೧೫ ರ ಜನವರಿಯವರೆಗೆ ಅಮೆರಿಕದ ಭಾರತೀಯ ರಾಯಭಾರಿಯಾಗಿದ್ದ ಜೈಶಂಕರ್ ಅವರು ಅಮೆರಿಕದ ಪ್ರಮುಖ ಜನಪ್ರತಿನಿಧಗಳು, ಉದ್ಯಮಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.