ವಿದೇಶದಲ್ಲಿ ಉನ್ನತ ವ್ಯಾಸಂಗ ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ದಾವಣಗೆರೆ. ಜ.೬: ವಿದೇಶದಲ್ಲಿ ಉನ್ನತ ವ್ಯಾಸಂಗ ಬಯಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಜಿಎಂಐಟಿ ತಾಂತ್ರಿಕ ಮಹಾವಿದ್ಯಾಲಯವು  ಚಿತ್ರದುರ್ಗ ಮೂಲದ ಕೆ ಸಿ ಓವರ್ಸೀಸ್ ಸಂಸ್ಥೆಯೊಡನೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷವೂ ಜಿಎಂ ತಾಂತ್ರಿಕ ಮಹಾವಿದ್ಯಾಲಯದಿಂದ ಸುಮಾರು ಹತ್ತರಿಂದ ಹದಿನೈದ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ತಾಂತ್ರಿಕ ವಿದ್ಯಾರ್ಥಿಗಳು ಜರ್ಮನಿ, ಕೆನಡಾ, ಅಮೆರಿಕ, ಇಟಲಿ  ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳಿಗೆ ಉನ್ನತ ವ್ಯಾಸಂಗ ಬಯಸುತ್ತಿದ್ದು, ಆ ನಿಟ್ಟಿನಲ್ಲಿ ಸಲಹೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಕೆ ಸಿ ಓವರ್ಸಿಸ್ ಸಂಸ್ಥೆಯೊಡನೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ವಿದೇಶಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಸ್ಕಾಲರ್ಶಿಪ್ ಮತ್ತು ಪಾರ್ಟ್ ಟೈಮ್ ಉದ್ಯೋಗ ಭರವಸೆಯನ್ನು ನೀಡುತ್ತಿವೆ ಎಂದು ಕೆ ಸಿ ಓವರ್ಸಿಸ್ ಸಂಸ್ಥೆಯ ಮುಖ್ಯಸ್ಥರುಗಳಾದ ಶ್ರೀಮತಿ ರೂಪ ಮತ್ತು ಶ್ರೀಮತಿ ಸವಿತಾ ಇದೆ ವೇಳೆ ತಿಳಿಸಿದರು. ಮೂರು ವರ್ಷಗಳ ಈ ಒಪ್ಪಂದದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು