ವಿದೇಶಗಳಲ್ಲಿ ರಾಮಕೃಷ್ಣ ಆಶ್ರಮದ ಯತಿಗಳ ಪ್ರವಚನ

ತುಮಕೂರು, ಸೆ. ೩೦- ಕರ್ನಾಟಕದ ವಿವಿಧ ರಾಮಕೃಷ್ಣಾಶ್ರಮಗಳ ಯತಿಗಳಾದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತೀ(ಗದಗ-ಬಿಜಾಪುರ), ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ(ತುಮಕೂರು) ಮತ್ತು ಪೂಜ್ಯ ಸ್ವಾಮಿ ಪರಮಾನಂದಜೀ ಮಹಾರಾಜ್(ರಾಮನಗರ) ರವರುಗಳು ವಿಶೇಷ ಪ್ರವಚನಗಳಿಗಾಗಿ ಸೌದಿ ಅರೇಬಿಯಾ, ಜರ್ಮನಿ, ನೆದರ್‌ಲ್ಯಾಂಡ್, ಸ್ವಿಟ್ಸರ್‌ಲ್ಯಾಂಡ್ ಮತ್ತು ಇಟಲಿ ರಾಷ್ಟ್ರಗಳಿಗೆ ಸೆ. ೨೯ ರಿಂದ ಅ. ೨೫ ರವರೆಗೆ ಪ್ರವಾಸ ಮಾಡಲಿದ್ದಾರೆ.
ಸೌದಿ ಅರೇಬಿಯಾದ ವಿಶ್ವವಿಖ್ಯಾತ ಶೇಖ್‌ಝಯೀದ್ ಮಸೀದಿಯ ಆಡಳಿತ ವರ್ಗದವರು ಪೂಜ್ಯರನ್ನು ಆಹ್ವಾನಿಸುತ್ತಿದ್ದಾರಲ್ಲದೆ, ದುಬೈ, ಮಸ್ಕಟ್ ಹಾಗೂ ಅಬುದಾಬಿ ನಗರಗಳಲ್ಲಿ ವಿಶೇಷ ಪ್ರವಚನಗಳು ‘ಮಾನವೀಯ ಮೌಲ್ಯಗಳು ಹಾಗೂ ವಿಶ್ವಭ್ರಾತೃತ್ವ ಕುರಿತಾಗಿ ನೆರವೇರಲಿವೆ.
ಪ್ರವಾಸದಲ್ಲಿ ದುಬೈನ ಅರಸ ಶೇಖ್‌ಅಲ್ನಹ್ಯಾನ್ ಮುಬಾರಕ್ ರವರನ್ನು ಮತ್ತು ಸಾಂಸ್ಕೃತಿಕ ಮುಖಂಡರೆನಿಸಿದ ಮೊಹಮ್ಮದ್ ಬಿನ್ ರಷೀದ್ ರವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಜರ್ಮನಿಯ ಮ್ಯುನಿಕ್ ನಗರದಲ್ಲಿ ಹಿಂದೂ ಸೇವಾ ಸಂಘದ ವತಿಯಿಂದ ಏರ್ಪಡಿಸುವ ’ನವರಾತ್ರಿ ವೈಭವ’ ಉತ್ಸವವನ್ನು ಪೂಜ್ಯ ಸ್ವಾಮಿ ನಿರ್ಭಯಾನಂದಜೀ ಉದ್ಘಾಟಿಸುವರು. ಹ್ಯಾಮ್‌ಬರ್ಗ ನಗರದ ಕನ್ನಡ ಒಕ್ಕೂಟದವರಿಂದ ವಿಶೇಷ ಸಂವಾದ ಕಾರ್ಯಕ್ರಮ ನೆರವೇರಲಿದೆ. ನೆದರ್‌ಲ್ಯಾಂಡ್‌ನ ಅಮ್‌ಸ್ಟರ್ಕ್ಯಾಮ್ ನಗರದಲ್ಲಿ ಹಿಂದೂ ಸೇವಾ ಸಂಘದ ವತಿಯಿಂದ ವಿಶೇಷ ಪ್ರವಚನ ಮತ್ತು ಸಂವಾದ ಕಾರ್ಯಕ್ರಮ ನೆರವೇರಲಿದೆ.
ಇದೇ ಸಂದರ್ಭದಲ್ಲಿ ಎರಡೂ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣ ಮಠ ಮತ್ತು ಮಿಷನ್‌ನ ಶಾಖಾ ಕೇಂದ್ರಗಳಿಗೆ ಪೂಜ್ಯರು ಭೇಟಿ ನೀಡಲಿದ್ದಾರೆ.
ಇಟಲಿಯ ಆಲ್ತರೆ ಪ್ರಾಂತ್ಯದ ಶ್ರೀ ಗೀತಾನಂದಾಶ್ರಮದಲ್ಲಿ ನವರಾತ್ರಿ ಕುರಿತಾದ ವಿಶೇಷ ಸತ್ಸಂಗದಲ್ಲಿ ಪೂಜ್ಯರು ಭಾಗವಹಿಸಲಿದ್ದಾರೆ.
ಸ್ವಿಡರ್ಸ್‌ಲ್ಯಾಂಡ್‌ನ ಜ್ಯೂರಿಕ್, ವಿಂಟರ್‍ಥೋರ್ ನಗರಗಳಲ್ಲಿ ಮಹಾನವಮಿ ಹಾಗೂ ವಿಜಯ ದಶಮಿಯ ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.