
ಕಲಬುರಗಿ,ಆ.20-ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳು ನಡೆಸುವ ಮೋಸದಾಟಕ್ಕೆ ಹಲವಾರು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಒಂದು ಪ್ರಕರಣ ನಗರದಲ್ಲಿ ಈಚೆಗೆ ನಡೆದಿದೆ.
ಖಾಸಗಿ ಶಾಲಾ ಶಿಕ್ಷಕರಾಗಿರುವ ಆಜಾದಪುರ ರಸ್ತೆಯ ಹುಂಡೈಕರ್ ಕಾಲೋನಿಯ ಮಹ್ಮದ್ ಅಬ್ದುಲ್ ರಶೀದಖಾನ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನಡೆಸಿದ ಮೋಸದಾಟಕ್ಕೆ ಸಿಲುಕಿ 9.55 ಲಕ್ಷ ರೂ.ಕಳೆದುಕೊಂಡು ಕಂಗಾಲಾಗಿದ್ದಾರೆ.
ಮಹ್ಮದ್ ಅಬ್ದುಲ್ ರಶೀದಖಾನ್ ಅವರ ಮೊಬೈಲ್ ನಂಬರ್‍ಗೆ ಅಪರಿಚಿತ ವಾಟ್ಸಾಪ್‍ನಿಂದ ಡಿಜಿಟಲ್ ಓಶಿಯನ್ ಕಂಪನಿ ಹೆಸರಿನಲ್ಲಿ ಯ್ಯೂಟ್ಯೂಬ್‍ನಲ್ಲಿ ಮರ್ಚೆಂಟ್‍ರವರ ವಿಡಿಯೋಗಳನ್ನು ಲೈಕ್ ಮಾಡಿದರೆ ಪ್ರತಿ ವಿಡಿಯೋಗೆ 50 ರಿಂದ 100 ರೂ.ನೀಡುತ್ತೇವೆ. ದಿನಕ್ಕೆ ನೀವು 500 ರಿಂದ 3000ದವರೆಗೆ ಹಣ ಗಳಿಸಬಹುದು ಎಂದು ನಂಬಿಸಿ ಫೋನ್ ಪೇ ಮತ್ತು ಎನ್‍ಇಎಫ್‍ಟಿ ಮೂಲಕ ಬ್ಯಾಂಕ್ ಖಾತೆಗೆ ಹಂತಹಂತವಾಗಿ 9.55 ಲಕ್ಷರೂ.ಜಮಾ ಮಾಡಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಮಹ್ಮದ್ ಅಬ್ದುಲ್ ರಶೀದಖಾನ್ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.