ವಿಜ್ರಂಭಣೆಯಿಂದ ರಾಘವೇಂದ್ರ ಸ್ವಾಮಿಗಳ ರಥೋತ್ಸವ

ಅಥಣಿ : ಸೆ.3:ರಾಘವೇಂದ್ರ ಸ್ವಾಮಿಗಳ ಆರಾಧನೆಯ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯ ಘೋಷದ ನಡುವೆ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು. ಮೂರು ದಿನ ನಡೆದ ಆರಾಧನಾ ಮಹೋತ್ಸವದಲ್ಲಿ ರಾಯರು ವೃಂದಾವನ ಸ್ವೀಕರಿಸಿದ ಆರಾಧನಾ ಮಹೋತ್ಸವದಲ್ಲಿ ರಥೋತ್ಸವ ನಡೆಯುವ ಮೂಲಕ ಉತ್ಸವ ಕೊನೆಗೊಳ್ಳುತ್ತದೆ.
ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿದಂತೆ ಅನೇಕ ವಿಧವಾದ ಹೂಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡಿದ್ದ ರಥೋತ್ಸವ ಭಕ್ತರ ಮನಸೂರೆ ಗೊಂಡಿತ್ತು. ಹೋಮ ಹವನಾದಿ, ಪೂರ್ಣಾಹುತಿ ನೀಡಿದ ನಂತರ ಪ್ರಾರಂಭಗೊಂಡ ರಥೋತ್ಸವ ತರುಣ ಭಕ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ರಥಕ್ಕೆ ಟೆಂಗಿನಕಾಯಿ ಒಡೆದು ಉತ್ತತ್ತಿ, ಹಣ್ಣುಗಳನ್ನು ಅರ್ಪಿಸುತ್ತಿರುವುದು ಸಾಮಾನ್ಯವಾಗಿತ್ತು. ಪ್ರಮುಖವಾಗಿ ರಥೋತ್ಸವದಲ್ಲಿ ಮುಂಬೈ, ಬೆಂಗಳೂರು, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಪುಣೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಂದ ಭಕ್ತರ ದಂಡು ಕೊನೆಯ ದಿನದ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿತ್ತು.
ರಥೋತ್ಸವ ಪ್ರಾರಂಭವಾಗುತ್ತಿದ್ದಂತೆಯೇ ತರುಣ ಭಕ್ತರಿಂದ ವಾಸುದೇವ ಹರಿ ಎನ್ನುವ ಘೋಷಣೆ ಮುಗಿಲು ಮುಟ್ಟುವಂತಿತ್ತು. ಶ್ರೀ ಸುಧಾ ಭಜನಾ ಮಂಡಳದ ಸದಸ್ಯೆಯರಿಂದ , ಚಿಕ್ಕ ಮಕ್ಕಳಿಂದ ಕೋಲಾಟ ಸೇರಿದಂತೆ ಭಕ್ತರಿಂದ ಬಾರೋ ರಾಘವೇಂದ್ರಾ, ಊರಿಗೆ ಬಂದರೆ ರಾಘವೇಂದ್ರ ನಮ್ಮ ಕೇರಿಗೂ ಬಾ ರಾಘವೇಂದ್ರ, ಅಥಣಿಯೇ ಇಂದೆಮಗೆ ಮಂತ್ರಾಲಯ ಹೀಗೆ ಹತ್ತಾರು ಭಕ್ತಿ ಗೀತೆಗಳನ್ನು ಹಾಡಿ ಗಾಯನ ಸೇವೆ ಸಲ್ಲಿಸಿದರು.
ರಥೋತ್ಸವದ ನಂತರ ಸಾವಿರಾರು ಭಕ್ತರಿಗೆ ನಡೆದ ಅನ್ನಪ್ರಸಾದ ವಿತರಣೆಗೆ ನೂರಾರು ತರುಣ ಭಕ್ತರು ಟೊಂಕ ಕಟ್ಟಿ ನಿಂತಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂರು ದಿನಗಳ ಆರಾಧನಾ ಮಹೋತ್ಸವದ ಮೂರು ದಿನಗಳಲ್ಲಿ ಯಾವುದೇ ಭೇದ ಭಾವ ಇಲ್ಲದೆ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾಗಿ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು,