ವಿಜ್ರಂಭಣೆಯಿಂದ ದಶಲಕ್ಷಣ ಪರ್ವ ಪೂಜಾ ಕಾರ್ಯಕ್ರಮ

ಕಾಗವಾಡ : ಸೆ.9:ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ 1008 ಭಗವಾನ ಮಹಾವೀರ ದಿಗಂಬರ ಜೈನ ಮಂದಿರದಲ್ಲಿ ದಶಲಕ್ಷಣ ಪರ್ವ ಪೂಜಾ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿ ಭಾವದಿಂದ ಜರುತ್ತಿವೆ. ದಶಲಕ್ಷಣ ಪರ್ವದ 9 ನೇ ದಿನವಾದ ಇಂದು ಮಂದಿರದ ಅಧ್ಯಕ್ಷರಾದ ರಾಮಗೌಡ ಉರ್ಫ ಮಾಮಾಸಾಬ ಪಾಟೀಲ ಇವರ ನೇತೃತ್ವದಲ್ಲಿ 41 ಶ್ರಾವಕ ಶ್ರಾವಕಿಯರು ಸೇರಿದಂತೆ ಅನೇಕರು ಭಗವಾನ ಮಹಾವೀರರ ಪಂಚಾಮೃತ ಅಭಿಷೇಕ, ಮಹಾ ಮಸ್ತಕಾಭೀಷೇಕ, ನಿತ್ಯವಿಧಿ ವಿಧಾನಗಳು, 24 ತೀಥರ್ಂಕರರ ಪೂಜೆ, ನವದೇವತಾ ಪೂಜೆ, ಸೋಡಸ್ಕಾರ ಪೂಜೆ ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಕಳೆದ 8 ದಿನಗಳಿಂದ ಜಿನ ಮಂದಿರದಲ್ಲಿ ಅನೇಕ ಧಾರ್ಮಿಕ ಪೂಜಾ ವಿಧಾನಗಳು ನಿರಂತರವಾಗಿ ನಡೆಯುತ್ತಿದ್ದು, ಈ ಎಲ್ಲ ಪೂಜಾ ವಿಧಿವಿಧಾನಗಳನ್ನು ಮಂದಿರದ ಅರ್ಚಕರಾದ ಸನ್ಮತಿ ಉಪಾಧ್ಯೆಯವರು ನಡೆಸಿಕೊಂಡು ಬರುತ್ತಿದ್ದಾರೆ.
ಪಟ್ಟಣದ ಮಹಾವೀರ ಜಿನ ಮಂದಿರದಲ್ಲಿ 10 ದಿನಗಳ ಕಾಲ ನಡೆಯುವ ದಶಲಕ್ಷಣ ಪರ್ವ ಕಾರ್ಯಕ್ರಮದಲ್ಲಿ 41 ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದಾರೆ.
ನಾಳೆ ಶ್ರೀ ಪದ್ಮಾವತಿ ದೇವಿಗೆ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.