ವಿಜ್ಞಾನ ಮಾದರಿಗಳಿಂದ ಕಲಿಕೆ ಸುಲಭ: ಗುಂಡಪ್ಪ ಹುಡಗೆ

ಬೀದರ:ಮಾ.30: ‘ಮಾದರಿ ಉಪಕರಣಗಳ ಮೂಲಕ ವೈಜ್ಞಾನಿಕ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಿದೆ. ಇದರಿಂದ ಕಲಿಕೆ ಸುಲಭ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹಾಗೂ ಕ್ರಿಯಾಶೀಲತೆ ಹೆಚ್ಚಾಗುತ್ತದೆ’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಸಹಾಯಕ ಉಪ ಸಮನ್ವಯಾಧಿಕಾರಿ ಗುಂಡಪ್ಪ ಹುಡುಗೆ ತಿಳಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ, ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರ ಹಾಗೂ ಜಿ.ಎನ್.ಡಿ ಎಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ತಾಲ್ಲೂಕಿನ ಬಕ್ಕಚೌಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜ್ಞಾನ ಸೇತು ವಿಜ್ಞಾನ ಮಾದರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ರುದ್ರಾ ಮಾತನಾಡಿ, ‘ವಿಜ್ಞಾನ ಮಾದರಿಗಳಿಂದ
ಮಕ್ಕಳಲ್ಲಿ ಹೊಸ ಚೈತನ್ಯ ಮೂಡುತ್ತದೆ. ಆಸಕ್ತಿ ಹೆಚ್ಚುತ್ತದೆ’ ಎಂದು ಹೇಳಿದರು.

ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಬಾಬುರಾವ್‌ ಸಲಸಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಕಾಶ ರೆಡ್ಡಿ, ಸುನೀಲಕುಮಾರ ಗಾಯಕ್‍ವಾಡ ಇದ್ದರು. ಸಿ.ಆರ್.ಪಿ ಚಂಚಲ ಕಾರ್ಯಕ್ರಮ ನಿರೂಪಿಸಿದರು.