ವಿಜ್ಞಾನ ಮನುಷ್ಯನ ಬೆಳವಣಿಗೆಯಷ್ಟೇ ವಿನಾಶಕ್ಕೂ ಕಾರಣ: ಸ್ವಾಮೀಜಿ

ಅರಸೀಕೆರೆ, ಆ. ೬- ಮನುಷ್ಯನ ಬೆಳವಣಿಗೆಗೆ ವಿಜ್ಞಾನ ಎಷ್ಟು ಪೂರಕವಾಗಿದೆಯೋ ಅಷ್ಟೇ ಮನುಕುಲದ ವಿನಾಶಕ್ಕೂ ಕಾರಣವಾಗಲಿದೆ ಎಂದು ಕೋಳಗುಂದ ಕೇದಿಗೆ ಮಠದ ಜಯ ಚಂದ್ರಶೇಖರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಧಾರ್ಮಿಕ ಕಾರ್ಯಕ್ರಮದ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು ಆಧುನಿಕ ಜೀವನಶೈಲಿ ಮನುಷ್ಯನ ಬದುಕನ್ನ ನಿರಾಳವಾಗಿಸಿದೆ ಆದರೆ ಮಾನಸಿಕವಾಗಿ ಮನುಷ್ಯ ದುರ್ಬಲನಾಗುತ್ತಿದ್ದಾನೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕವಾಗಿ ಸದೃಢವಾಗಿರುವ ಮನುಷ್ಯನ ಬದುಕು ಮಾತ್ರ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ ಅಂತ ಬದುಕು ಆಧ್ಯಾತ್ಮಿಕತೆಯ ಒಲವಿನಿಂದ ಪಡೆಯಲು ಮಾತ್ರ ಸಾಧ್ಯ ಎಂದು ಕಿವಿಮಾತು ಹೇಳಿದರು.
ಅನಂತ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಆರ್. ಅನಂತಕುಮಾರ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು.ಗುರು ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವವನ್ನ ಬೆಳೆಸುವಲ್ಲಿ ಪೋಷಕರು ಆದ್ಯತೆ ನೀಡದಿರುವುದು ಜತೆಗೆ ಮೊಬೈಲ್ ಎಂಬ ಗೀಳು ಮಕ್ಕಳನ್ನು ಸುಲಭವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಷ್ಟೇ ಅಲ್ಲದೆ ಸಮಾಜದ ಮೇಲು ವ್ಯತರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ತಂದೆ ತಾಯಿಯರು ಅರಿತು ತಮ್ಮ ಮಕ್ಕಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸೊರಬ ಶ್ರೀ ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಭವಿಷ್ಯದ ಆಗು ಹೋಗುಗಳ ಕುರಿತು ನಿಖರ ಭವಿಷ್ಯವಾಣಿ ಮೂಲಕ ಪ್ರಸಿದ್ಧಿಯಾಗಿರುವ ಕೋಡಿ ಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಗಳು ಆಧ್ಯಾತ್ಮಿಕ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಸಾಲು ಸಾಲಾಗಿ ಬರುವ ಹಬ್ಬ ಹರಿದಿನಗಳು ಜತೆಗೆ ಕೋಡಿಮಠದಲ್ಲಿ ನಡೆಯುತ್ತಿರುವ ಶ್ರಾವಣ ಸಂಜೆ ಧಾರ್ಮಿಕ ಸಮಾರಂಭವು ನಿಜಕ್ಕೂ ಅರ್ಥಪೂರ್ಣವಾಗಿದ್ದು, ನಾನಾ ಮಠಾಧೀಶರು ನೀಡುವ ಉಪನ್ಯಾಸ ವಿಚಾರಧಾರೆಗಳು ಭಕ್ತರ ಶ್ರವಣಗಳಿಗೆ ಹಬ್ಬವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು, ತರೀಕೆರೆ ನಂದಿ ಮಠದ ಶ್ರೀಗಳು, ಶಿವಮೊಗ್ಗ ಹಾರನಹಳ್ಳಿ ಮಠದ ಶ್ರೀಗಳು, ಉದ್ಯಮಿಗಳಾದ ಸುರೇಶ್ ರೆಡ್ಡಿ, ವಿನೋದ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.