ವಿಜ್ಞಾನ ಬದುಕಿನ ಅವಿಭಾಜ್ಯ ಅಂಗ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.28: ಇಂದು ನಾವು ವಿಜ್ಞಾನ ಯುಗದಲ್ಲಿದ್ದೇವೆ. ವಿಜ್ಞಾನ ನಮ್ಮ ಬದುಕಿನ ಅವಿಭಾಜ್ಯವಾಗಿದೆ. ನಮ್ಮ ಸುತ್ತಲಿನ ಅನೇಕ ಸಮಸ್ಯೆಗಳಿಗೆ ವಿಜ್ಞಾನವೇ ಕಾರಣ ಎಂದು ವಿಜ್ಞಾನ ಲೇಖಕ ಡಾ|| ಯು. ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ
ಅವರು ಇಂದು ನಗರದ  ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಭೌತಶಾಸ್ತ್ರ ವಿಭಾಗದಿಂದ ಆಚರಿಸಲಾದ “ರಾಷ್ಟ್ರೀಯ ವಿಜ್ಞಾನ ದಿನ” ದ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 1928ರ ಫೆಬ್ರವರಿ 28 ರಂದು “ರಾಮನ್ ಎಫೆಕ್ಟ್” ಸಂಶೋಧನೆಯನ್ನು ಅಂತಿಮವಾಗಿ ಪ್ರಕಟಿಸಿದ ಕಾರಣ ಸದರಿ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ”ವಾಗಿ ಆಚರಿಸಲಾಗುತ್ತಿದೆ. ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಸಂಶೋಧನೆ ಮತ್ತು ಭಾರತದ ಯುವ ವಿಜ್ಞಾನಿಗಳಿಗೆ ಸೂಕ್ತವಾದ ಅವಕಾಶಗಳು ಸಿಗಬೇಕೆಂದು ಅವರು ‘ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್’ ಎಂಬ ಸಂಸ್ಥೆ ಅರಂಭಿಸಿದರು.  ಮುಂದೆ ಅದು 1948 ರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯಾಯಿತು. 1930ರಲ್ಲಿ ಅವರು ನೋಬೆಲ್ ಪ್ರಶಸ್ತಿ ಪಡೆದರು, 1954 ರಲ್ಲಿ ಅವರಿಗೆ ಭಾರತ ಸರ್ಕಾರವು ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು ಎಂದು ತಿಳಿಸಿದರು.
ವಿಭಾಗ ಮುಖ್ಯಸ್ಥ ಡಾ. ಟಿ. ಮಾಚಪ್ಪನವರು ರಾಮನ್ ಎಫೆಕ್ಟ್ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್, ಡಾ.ಈರಣ್ಣ, ಡಾ.ಸುರೇಶ, ಡಾ.ವಿಜಯಕುಮಾರ್, ಡಾ.ಗುರುರಾಜ್, ಡಾ.ಶೇಖ್‌ಮೀರಾ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಸ್ವಾಗತಿಸಿದರು, ಶ್ರುತಿ ನಿರೂಪಿಸಿದರು, ತೇಜಸ್ವಿನಿ ವಂದನಾರ್ಪಣೆ ಮಾಡಿದರು.