ವಿಜ್ಞಾನ ಪ್ರಶ್ನೆ  ಕುತೂಹಲವನ್ನು ಹುಟ್ಟಿಸುತ್ತದೆ.


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ 22: ಹೊಸತನ್ನು ಕಲಿಯುವ ,ಕುತೂಹಲವನ್ನು ಹುಟ್ಟಿಸುವ ,ಪ್ರಶ್ನೆ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು  ಹೆಚ್ಚಿಸುವ ಕೆಲಸವನ್ನು ವಿಜ್ಞಾನ ಮಾಡುತ್ತದೆ. ಅದು ನಮ್ಮ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದು ವಾಸವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಾಯಿ ಸಂದೀಪ್ ಹೇಳಿದರು.
ಅವರು ನಿನ್ನೆ   ನಗರದ ಸರಳಾದೇವಿ ಕಾಲೇಜಿನಲ್ಲಿ  ಭೌತಶಾಸ್ತ್ರ ವಿಭಾಗ ಹಾಗೂ ವಿಜ್ಞಾನ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ ವಿಜ್ಞಾನ ವಿದ್ಯಾರ್ಥಿಗಳ ಉಪನ್ಯಾಸ  ಸ್ಪರ್ಧೆ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಸಹಜವಾಗಿ ವೈಜ್ಞಾನಿಕ ಪ್ರತಿಭೆ ಇರುತ್ತದೆ. ಅಧ್ಯಾಪಕರು ಅದನ್ನು ಗುರುತಿಸಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಸಂಶಯಗಳನ್ನು ನಿವಾರಿಸುವ ಮೂಲಭೂತ ವಿಜ್ಞಾನದ ಪರಿಕಲ್ಪನೆಯನ್ನು ಅರಿತುಕೊಳ್ಳಬೇಕು. ಈ ಹೊತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯ ನಮಗೆ ಸಮರ್ಪಕವಾಗಿ ಬೇಕು ಎಂದು ವಿಶ್ಲೇಷಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ.ಮಂಜುನಾಥ್ ವಿಜ್ಞಾನ ದಿನಾಚರಣೆಯ ಅಂಗವಾಗಿ ಈ ತೆರನಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು , ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಅಭಿರುಚಿ , ಸಂಶೋಧನಾ ಮನೋಭಾವವನ್ನು ಬೆಳೆಸುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಹೆಚ್ .ಕೆ.ಮಂಜುನಾಥ ರೆಡ್ಡಿ  ಪಠ್ಯ ಮತ್ತು ಪಠ್ಯೇತರ ವಿಷಯಗಳ ಪ್ರತ್ಯಕ್ಷಿಕೆಗಳು ಮಕ್ಕಳ ಜ್ಞಾನ, ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ   ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಂಟು ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಷಯಗಳನ್ನು ಮಂಡಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಕುಂಚಂ ನರಸಿಂಹಲು ,ಡಾ. ಜ್ಞಾನ ಪ್ರಸುನ್ನಾಂಭ ,ಡಾ.ಗಂಗಾ ಶಿರೀಷಾ , ಡಾ. ಪಂಚಾಕ್ಷರಿ ,ಡಾ. ದೊಡ್ಡ  ಬಸವರಾಜ , ಸುಮಾ, ರಮಾಬಾಯಿ, ಡಾ. ಶಾಲಿನಿ, ಡಾ.ಶಿಲ್ಪಾ ಕುಲಕರ್ಣಿ, ತಿಪ್ಪೇಶ್  , ಮಧುಸೂಧನ ಮುಂತಾದವರು ಇದ್ದರು.

One attachment • Scanned by Gmail