ವಿಜ್ಞಾನ ಕಲಾ ವಸ್ತುಪ್ರದರ್ಶನ

ಬೆಂಗಳೂರು, ಜ. ೫-ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಮೊಬೈಲ್ ಮತ್ತು ಅಂತರ್ಜಾಲಗಳ ವ್ಯಸನಕ್ಕೆಕ್ಕೀಡಾಗಿ ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಕಳೆದುಕೊಂಡು ಮಾನಸಿಕ ರೋಗಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಕಳವಳ ವ್ಯಕ್ತಪಡಿಸಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಬಡಾವಣೆಯ ಬಿ.ಜಿ.ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ “ಕ್ಯೂರಿಯಾಸಿಟಿ” ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ತಾಂತ್ರಿಕತೆ ಜಗತ್ತಿನ ಅವಶ್ಯತೆಗಳಾದರೂ ಸಹ ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣ ಮಾರಕ ಪರಿಣಾಮಗಳಿಗೆ ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ವಿಮರ್ಶಾತ್ಮಕ ಮನೋಭಾವ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಕಾರ್ಯದರ್ಶಿ ಬಿ.ಜಿ.ಲಿಂಗರಾಜು ಮಾತನಾಡಿ, ವಸ್ತು ಪ್ರದರ್ಶನದಲ್ಲಿ ಸೋಲಾರ್ ಸಿಸ್ಟಂ, ಉಪಗ್ರಹ, ಪ್ಲಾನೆಟ್, ಕೃಷಿ, ಹವಾಮಾನ, ಮಳೆನೀರು ಸಂರಕ್ಷಣೆ, ಯೋಗ, ಗಣತ, ಭೌತಶಾಸ್ತ್ರ ಖಗೋಳಶಾಸ್ತ್ರ, ಭೂಗೋಳ, ಸಮಾಜ, ಇತಿಹಾಸ, ಕನ್ನಡ, ಹಿಂದಿ ಭಾಷೆಗಳಿಗೆ ಹಾಗೂ ಜಗತ್ತಿನ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಾದರಿಗಳ ಪ್ರಾತ್ಯಕ್ಷಿಕೆಗಳನ್ನು ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಮಾರ್, ಅಬಕಾರಿ ವಿಭಾಗದ ಡಿ.ವೈ.ಎಸ್.ಪಿ ಎ.ವಿ.ಗಿರೀಶ್, ರೇವಾ ವಿ.ವಿ.ಸಂಶೋಧನಾ ವಿಭಾಗದ ಸಹ ಪ್ರಾದ್ಯಾಪಕಿ ಡಾ.ಮಂಜುಳಾ. ಕೆ.ಆರ್, ವಿಜಯಜ್ಯೋತಿ ಶಿಕ್ಷಣಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶ್ರೀರಾಮಚಂದ್ರ, ಬಿ.ಜಿ. ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶಮಂತ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.