ವಿಜ್ಞಾನ ಓದಿ ಕಲಿಯುವುದಕ್ಕಿಂತ ಪ್ರಯೋಗ ಮಾಡಿ ಕಲಿಯಿರಿ

ಕಲಬುರಗಿ,ಮೇ.29-ಮಕ್ಕಳು ವಿಜ್ಞಾನವನ್ನು ಓದಿ ಕಲಿಯುವುದಕ್ಕಿಂತ ಪ್ರಯೋಗ ಮಾಡಿ ಕಲಿಯುಬೇಕು. ಕಂಠ ಪಾಠ ಮಾಡಿ ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದರೆ ಪ್ರಯೋಜನವಿಲ್ಲ. ಪ್ರಶ್ನಿಸುವ ಗುಣ ಹೊಂದಿರಬೇಕು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀ ನಾರಾಯಣ ಅಭಿಪ್ರಾಯಪಟ್ಟರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸರಣಿ ವೆಬಿನಾರ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅನುಪಯುಕ್ತ ವಸ್ತುಗಳನ್ನು, ಮಕ್ಕಳ ಆಟಿಕೆಗಳನ್ನು ಬಳಸಿಕೊಂಡು ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸಿದರು.
ವಿಜ್ಞಾನ ಪುಸ್ತಕದಲ್ಲಿಲ್ಲ, ಅದರಾಚೆ ಇದೆ. ಮಕ್ಕಳು ಆಸಕ್ತಿಯಿಂದ ಅನ್ವೇಷಿಸಬೇಕು. ವಿಜ್ಞಾನ ಕಲಿಯಲು ಪ್ರಯೋಗ ಶಾಲೆಗಳಿಗಿಂತ ವೈಜ್ಞಾನಿಕ ಮನೋಭಾವ ಹಾಗೂ ಪ್ರಯೋಗ ಶೀಲ ಮನಸ್ಸು ಮುಖ್ಯ ಎಂದರು. ಮಕ್ಕಳ ವಿನಂತಿಯ ಮೇರೆಗೆ ಎರಡು ದಿನಗಳ ಬಳಿಕ ವೆಬಿನಾರ ಮೂಲಕ ಮನೆಯಲ್ಲಿಯೇ ಮಕ್ಕಳಿಂದ ಪ್ರಯೋಗಗಳನ್ನು ಮಾಡಿಸಲು ಒಪ್ಪಿಕೊಂಡರು. ಅದಕ್ಕೆ ಬೇಕಾದ ವಸ್ತುಗಳ ಪಟ್ಟಿ ನೀಡಿ ಪ್ರಯೋಗಗಳನ್ನು ಮಾಡಲು ಆಸಕ್ತಿ ತುಂಬಿದರು.
ಶಾಲೆಯ ಪ್ರಿನ್ಸಿಪಾಲ ಸಿದ್ದಪ್ಪ ಭಗವತಿ ಮಾತನಾಡಿ ಪೋಷಕರ ಅತೀವ ಕಾಳಜಿಯಿಂದ ಮಕ್ಕಳು ಸ್ಕ್ರೂ ಡ್ರೈವರ, ಕತ್ತರಿ, ಸುತ್ತಿಗೆಗಳಂತಹ ವಸ್ತುಗಳನ್ನು ಉಪಯೋಗಿಸುವ ಕೌಶಲವನ್ನೂ ಕಲಿಯುತ್ತಿಲ್ಲ. ಪೆಟ್ಟಾಗಬಹುದೆಂಬ ಭಯವನ್ನು ಮಕ್ಕಳ ಮನಸ್ಸಿನಲ್ಲಿ ತುಂಬುತ್ತಿದ್ದೇವೆ. ಪೋಷಕರು ಮಕ್ಕಳಿಗೆ ಚಿಕ್ಕ ಪುಟ್ಟ ಸಾಮಾನುಗಳ ದುರಸ್ತಿ ಮಾಡಲು ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ತುಂಬಾ ವಿಷಯಗಳನ್ನು ಕಲಿಯುತ್ತಾರೆ ಎಂದರು.
ವೆಬಿನಾರನಲ್ಲಿ ಸಂಸ್ಥೆಯ ಅದ್ಯಕ್ಷ ಸುವರ್ಣ ಭಗವತಿ, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.