ಬೀದರ್:ಜೂ.11: ವಿಜ್ಞಾನ ಎಂಬುದು ಶಿಕ್ಷಣ ವ್ಯವಸ್ಥೆಯ ಪ್ರಮುಖ ಘಟ್ಟವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸುರೇಖಾ ಹೇಳಿದರು.
ಶುಕ್ರವಾರ ನಗರದ ಹೊರವಲಯದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೊ.ಎಂ.ಐ ಸವದತ್ತಿ ಸ್ಮರಣಾರ್ಥವಾಗಿ ವಿಜ್ಞಾನ ಶಿಕ್ಷಕರಿಗೆ ಒಂದು ದಿವಸದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ವಿಜ್ಞಾಣ ಇಲ್ಲದೇ ಜೀವನ ಇಲ್ಲ. ಇದು ಮನುಷ್ಯನ ವೈಚಾರಿಕ ದೃಷ್ಟಿಕೋನ ಹೆಚ್ಚಿಸುವುದರ ಜೊತೆಗೆ ಶಿಸ್ತು ಕಲಿಸಿ ಕೊಡುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶೈಕ್ಷಣಿಕ ಸಾಧನವೇ ವಿಜ್ಞಾನ ಎಂದರು.
ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡ ಈ ತರಬೇತಿಯ ಸದುಪಯೋಗ ಪಡೆದುಕೊಂಡು ಬರುವ ದಿನಗಳಲ್ಲಿ ವಿಜ್ಞಾನದ ಫಲಿತಾಂಶ ಸುಧಾರಣೆಯಾಗಬೇಕು, ಜೀವನದಲ್ಲಿ ಯಾವ ವ್ಯಕ್ತಿ ಪರಿಪೂರ್ಣ ಅಲ್ಲ, ನಿತ್ಯ ಹೊಸದೊಂದು ಕಲಿಯುವುದರಿಂದ ಶಿಕ್ಷಕರಾದವರು ಒಂದು ದೃಷ್ಟಿಯಲ್ಲಿ ವಿದ್ಯಾರ್ಥಿಗಳೇ ಆಗಿದ್ದಾರೆ. ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ಮಕ್ಕಳಲ್ಲಿ ಪರಿಪೂರ್ಣ ವಿಜ್ಞಾನದ ಜ್ಞಾನ ಭರಿಸಬೇಕು. ತಮ್ಮ ಮಕ್ಕಳಾದವರಿಗೆ ಬರೀ ಇಂಜಿನಿಯರ್, ಡಾಕ್ಟರ್ ಮಾಡುವ ಬದಲಿಗೆ ಇತರೇ ಕ್ಷೇತ್ರಗಳ ಜ್ಞಾನ ಬಿತ್ತಬೇಕೆಂದಾಗ ಭವಿಷ್ಯದ ಪಿಳಿಗೆಯಲ್ಲಿ ಪರಿಪೂರ್ಣ ಜ್ಞಾನ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಮಾತನಾಡಿ, ಈ ವರ್ಷ ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಫಲಿತಾಂಶ ಕೇವಲ 60 ಪ್ರತಿಶತದಷ್ಟಿದೆ. ಇದು ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗಿದ್ದು, ವಿಜ್ಞಾನದ ಪ್ರಮುಖ ಘಟ್ಟವಾದ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳನ್ನು ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು. ಇಂದಿನ ತರಬೇತಿಗೆ ಬಹಳಷ್ಟು ವಿಜ್ಞಾನ ಶಿಕ್ಷಕರು ಗೈರಾಗಿರುವುದು ದಯನಿಯ ಸಂಗತಿಯಾಗಿದ್ದು, ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಾಗಿ ಇಂತಹ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ಜಿ ಮೂಲಿಮನಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರೊ.ಎಂ.ಐ ಸವದತ್ತಿ ಅವರು ಕರ್ನಾಟಕ ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು. ನಂತರ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದರು. ಇವರಿಗೇ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿರೇಶ ರಾಂಪೂರ ಮಾತನಾಡಿದರು. ಗುಂಡಪ್ಪ ಹುಡಗೆ ಪ್ರಾಸ್ತಾವಿಕ ಮಾತನಾಡಿದರು.
ಮನ್ನಳ್ಳಿ ಕಾಲೇಜಿನ ಉಪನ್ಯಾಸಕ ದತ್ತು ತುಪ್ಪದ, ಹುಮನಾಬಾದ್ ಕಾಲೇಜಿನ ಜೈಶ್ರೀ ಕುಲಕರ್ಣಿ, ವಿಜ್ಞಾನ ಶಿಕ್ಷಕ ಡಾ.ತಾಜೋದ್ದಿನ್, ಮನ್ನಾಯಿಖೆಳ್ಳಿಯ ಸುಧಿರಕುಮಾರ ಬುಜ್ಜಿ, ಪ್ರೊ.ಮೂಲಿಮನಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಜಲಾದೆ ಕೋಶಾಧ್ಯಕ್ಷ ಓಂಕಾರ ಮಾಹಾಶಟ್ಟಿ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಸಾಯಿನಾಥ ನಿಟ್ಟೂರಕರ್ ಸ್ವಾಗತಿಸಿ, ಡಾ.ಶಿವರಾಜ ಗೋರನಾಳಕರ್ ಕಾರ್ಯಕ್ರಮ ನಿರೂಪಿಸಿದರು. ಶಿವಮಂಗಲಾ ವಂದಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೋಸೈಟಿ ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಪ್ರೊ.ಬಿ.ಜಿ ಮೂಲಿಮನಿ ಫೌಂಡೇಶನ್‍ಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.