ವಿಜ್ಞಾನವನ್ನು ಸರಳವಾಗಿ ಅರ್ಥೈಸಿಕೊಳ್ಳುವಲ್ಲಿ ಗ್ರಂಥಾಲಯಗಳು ದಾರಿದೀಪವಾಗಲಿ

ಮೈಸೂರು: ಜೂ.27:- ಕಬ್ಬಿಣದ ಕಡಲೆ ಎಂದು ಭಾವಿಸುವ ವಿಜ್ಞಾನ ವಿಷಯವನ್ನು ಸರಳವಾಗಿ ಅರ್ಥೈಸಿಕೊಳ್ಳುವಲ್ಲಿ ಗ್ರಂಥಾಲಯಗಳು ದಾರಿದೀಪವಾಗುವಂತೆ ಗ್ರಂಥಾಲಯಗಳನ್ನು ಉನ್ನತೀಕರಿಸಿ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಹಾಗೂ ವಿಜ್ಞಾನ ಪ್ರಸಾರ ನವದೆಹಲಿ ರವರ ಕುತುಹಲಿ ಸ್ಕೋಪ್ ಯೋಜನೆಯ ಸಹಯೋಗದೊಂದಿಗೆ ಗ್ರಂಥಾಲಯದಲ್ಲಿ ಮಾಡಬಹುದಾದ ವಿಜ್ಞಾನ ಕಲಿಕೆಯ ಚಟುವಟಿಕೆಗಳು ಹಾಗೂ ಗ್ರಂಥಾಲಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ಕುರಿತು ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಂಥಾಲಯವನ್ನು ಉನ್ನತೀಕರಿಸಿ ಬರುವ ಓದುಗರಿಗೆ ಸೌಲಭ್ಯ ಒದಗಿಸಬೇಕು. ಅದಕ್ಕಾಗಿ ನಿಮ್ಮ ಜ್ಞಾನ ವನ್ನು ವೃದ್ಧಿಸಿಕೊಳ್ಳಲು ತರಬೇತಿಯನ್ನು ಪಡೆದುಕೊಳ್ಳಿ. ವಿಜ್ಞಾನವನ್ನು ಸುಲಭವಾಗಿ ಮಕ್ಕಳಿಗೆ ಅರ್ಥೈಸುವಲ್ಲಿ ಜಿಲ್ಲೆಯ 255 ಗ್ರಂಥಾಲಯಗಳಲ್ಲಿ ವಿವಿಧ ಚಟುವಟಿಕೆಗಳನ್ನು ರೂಪಿಸುವುದು ನಮ್ಮ ಈ ಕಾರ್ಯಗಾರದ ಉದ್ದೇಶ. ಸಾಮಾನ್ಯವಾಗಿ ವಿಜ್ಞಾನದ ವಿಷಯಗಳು ಆಂಗ್ಲ ಭಾಷೆಯಲ್ಲಿ ಇರುತ್ತವೆ. ಆದರೆ ಕೆಲವೊಂದು ಬಾರಿ ಇವುಗಳನ್ನು ಅರ್ಥೈಸಿಕೊಳ್ಳುವಲ್ಲಿ ಮಕ್ಕಳು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಮಾತೃಭಾಷೆಯಲ್ಲಿ ಮಕ್ಕಳಿಗೆ ವಿಜ್ಞಾನವನ್ನು ಅರ್ಥೈಸಿದರೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಂಥಪಾಲಕರು ಚಟುವಟಿಕೆಯಿಂದ ಕೆಲಸ ನಿರ್ವಹಿಸಬೇಕು. ಪ್ರತಿಯೊಬ್ಬ ಗ್ರಂಥಪಾಲಕರು ಮಕ್ಕಳಿಗೆ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿ. ಗ್ರಂಥಾಲಯಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಕಟ್ಟಡಗಳಿಲ್ಲದ ಹಾಗೂ ಗ್ರಂಥಾಲಯಕ್ಕೆ ಅವಶ್ಯಕತೆ ಇರುವ ಉಪಕರಣಗಳನ್ನು ಪೂರೈಸಿ ಗ್ರಂಥಾಲಯಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಹಾಗೂ 15 ದಿನಗಳಿಗೊಮ್ಮೆ ಗ್ರಂಥಾಲಯಗಳ ಕುರಿತು ಮಾಹಿತಿ ಪರಿಶೀಲಿಸಲಾಗುವುದು ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ದೀನಬಂಧು ಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಜಯದೇವ ಅವರು ಮಾತನಾಡಿ, ಪುಸ್ತಕ ಪ್ರೇಮ ನನಗೆ ಹುಟ್ಟಿನಿಂದಲೇ ಬಂದಿದೆ. ಪುಸ್ತಕದ ಸಾಂಗತ್ಯವಿದ್ದರೆ ಪುಸ್ತಕವೇ ಬದುಕನ್ನ ಬದಲಿಸುತ್ತದೆ. ಜ್ಞಾನ ಭಂಡಾರವನ್ನು ಜನರ ಹೃದಯಕ್ಕೆ ತುಂಬುವ ಸ್ಥಳ ಗ್ರಂಥಾಲಯ. ಆದ್ದರಿಂದ ಗ್ರಂಥಾಲಯಗಳಿಂದ ಏನೇನು ಮಾಡಬಹುದು ಎಂಬುದನ್ನು ಮನಗಂಡಾಗ ಮಾತ್ರ ಗ್ರಂಥಾಲಯದ ಮಹತ್ವ ತಿಳಿಯುತ್ತದೆ. ದೇಶದ ಹೃದಯವಾಗಿರುವ ಗ್ರಾಮಗಳಲ್ಲಿ ಗ್ರಂಥಾಲಯಗಳ ಮೂಲಕ ಸಾರ್ವಜನಿಕರಿಗೆ, ಮಕ್ಕಳಿಗೆ, ಗ್ರಾಮಸ್ಥರಿಗೆ ಜ್ಞಾನ ಭಂಡಾರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಗಾಂಧೀಜಿಯವರ ಬದುಕಿನ ಮೇಲು ಪುಸ್ತಕಗಳ ಪ್ರಭಾವವಿದೆ. ಪುಸ್ತಕ ಜ್ಞಾನದ ಬಾಗಿಲನ್ನು ತೆರೆಯುತ್ತದೆ. ಗ್ರಂಥಾಲಯಗಳನ್ನು ಮುಕ್ತವಾಗಿರಿಸಿ. ಪುಸ್ತಕಗಳು ಹಾಳಾಗುತ್ತವೆ ಎಂದು ಮುಟ್ಟಲೇಬೇಡಿ ಎನ್ನಬಾರದು ಬದಲಾಗಿ ಪುಸ್ತಕಗಳ ಮೇಲೆ ಗೌರವ ಶ್ರದ್ಧೆ, ರಕ್ಷಣಾ ಭಾವ ಬರುವಂತೆ ಮಾರ್ಗದರ್ಶನ ನೀಡಿ. ಜ್ಞಾನದ ಪರಿಭಾಷೆ ವಿಜ್ಞಾನಕ್ಕೆ ಬದಲಾಗಬೇಕು. ಸರಳವಾದ ವಿಜ್ಞಾನ ಆಟಿಕೆಗಳನ್ನು ಬಳಸಿ, ಮಕ್ಕಳಿಗೆ ವಿಜ್ಞಾನವನ್ನು ಅರ್ಥೈಸಿ. ಜ್ಞಾನದ ದಾಹವಿದ್ದಾಗ ಒಳಗಿನ ಪ್ರಪಂಚ ವಿಸ್ತಾರವಾಗುತ್ತದೆ. ಸಮಸ್ಯೆಗಳು ಕ್ಷುಲ್ಲಕವಾಗುತ್ತವೆ. ಹೊಸ ಸಾಧ್ಯತೆಗಳ ಬಾಗಿಲು ತೆರೆಯುತ್ತವೆ ಎಂದು ತಿಳಿಸಿದರು.
ಕೊಳ್ಳೇಗಾಲ ಶರ್ಮ ಅವರ ಜಾಣ ಪ್ರಶ್ನೆ ಮತ್ತು ಅಡ್ಯನಡ್ಕ ಕೃಷ್ಣ ಭಟ್ ಅವರ ಆಯ್ದ ಬರಹಗಳು (ವಿಜ್ಞಾನ ಸಾಹಿತ್ಯ ಸಂಚಯ) ಎಂಬ ಪುಸ್ತಕಗಳ 500 ಪ್ರತಿಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಕೊಳ್ಳೇಗಾಲ ಶರ್ಮ ಅವರು ಕೊಡುಗೆಯಾಗಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಿ.ಎಫ್.ಟಿ.ಆರ್.ಐ ನ ನಿವೃತ್ತ ಮುಖ್ಯ ವಿಜ್ಞಾನಿಗಳಾದ ಕೊಳ್ಳೇಗಾಲ ಶರ್ಮ, ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಗಳಾದ ಕೃಷ್ಣಂ ರಾಜು, ಸಹಾಯಕ ಕಾರ್ಯದರ್ಶಿಗಳಾದ ಕುಲದೀಪ್, ಯೋಜನಾ ನಿರ್ದೇಶಕರಾದ ಸವಿತಾ ಹಾಗೂ ಜಿಲ್ಲೆಯ ಗ್ರಂಥಾಲಯದ ಗ್ರಂಥ ಪಾಲಕರುಗಳು ಉಪಸ್ಥಿತರಿದ್ದರು