ವಿಜ್ಞಾನದ ಅಳವಡಿಕೆಯಿಂದ ಬದುಕು ಸುಂದರ

ಕಲಬುರಗಿ:ಫೆ.28: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ವಿಜ್ಞಾನದ ಬೆಳವಣಿಗೆಯ ಮೇಲೆ ಅವಲಂಬಿಸಿದೆ. ವಿಜ್ಞಾನವು ಹೊಸ ಸಂಶೋಧನೆಗಳ ಮೂಲಕ ಅನೇಕ ಸೌಕರ್ಯಗಳನ್ನು ದೊರೆಯುವಂತೆ ಮಾಡಿ, ಯಾವುದೇ ರಾಷ್ಟ್ರವು ಅತ್ಯಂತ ಶೀಘ್ರವಾಗಿ ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ. ಮೌಢ್ಯತೆ, ಕಂದಾಚಾರ, ಅಂಧಶೃದ್ಧೆಯಿಂದ ಹೊರಬಂದು ಸತ್ಯ, ವೈಚಾರಿಕತೆಯನ್ನು ಹೊಂದಿರುವ ವಿಜ್ಞಾನದ ಅಂಶಗಳು, ವಿಷಯಗಳು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಉಪನ್ಯಾಸಕ, ವಿಚಾರವಾದಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಜ್ಞಾನವು ರಾಷ್ಟ್ರದ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ, ಸಂಶೋಧನಾ ಪ್ರವೃತ್ತಿ ಬೆಳೆಯುವಂತೆ ಶಿಕ್ಷಕರು ಪೂರಕವಾದ ವಾತಾವರಣ ನಿರ್ಮಿಸಬೇಕು. ಸರ್.ಸಿ.ವಿ.ರಾಮನ್ ಅವರು ತಮ್ಮ ‘ರಾಮನ್ ಪರಿಣಾಮ’ ಸಂಶೋಧನೆಯ ಮೂಲಕ ಇಡೀ ವಿಶ್ವವೇ ಭಾರತದಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆಯ ಕಾರಣವೆಂಬ ಸಂಶೋಧನೆಗೆ ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬಲ್ ಪಾರಿತೋಷಕ 1930 ರಲ್ಲಿ ಪಡೆದು ನಮ್ಮ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ಇದರ ಸವಿನೆನಪಿಗಾಗಿ ಪ್ರತಿವರ್ಷ ‘ಫೆ-28’ನ್ನು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ಶೃತಿ ಶಿರೂರ್, ಸೋಹೆಲ್ ಶೇಖ್ ಹಾಗೂ ವಿದ್ಯರ್ಥಿಗಳು ಭಾಗವಹಿಸಿದ್ದರು.