
ಕಲಬುರಗಿ:ಫೆ.28: ಸಾಂಪ್ರದಾಯಿಕ ಜ್ಞಾನದ ಮೂಲ ನೆಲೆಯಿಂದ ಆಧುನಿಕ ವಿಜ್ಞಾನ ಕ್ಷೇತ್ರ ಬೆಳೆದಿದೆ. ವೇದಶಾಸ್ತ್ರ ಹಾಗೂ ಪುರಾಣ ಪದ್ಧತಿಗಳ ಮೂಲ ಆಶಯಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ಮತ್ತು ಸಂಶೋಧನೆಗಳ ಫಲವಾಗಿ ಮಾನವ ಜನಾಂಗದ ಬದುಕು ಸುಧಾರಣೆ ಕಂಡಿದೆ ಎಂದು ಹೈದ್ರಾಬಾದಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್. ಎಂ. ಸಂಪತ್ ಕುಮಾರ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಪ್ರಪ್ರಥಮ ವಿಜ್ಞಾನಿಯಾದ ಸರ್. ಸಿ. ವಿ. ರಾಮನ್ ಮನುಕುಲದ ಒಳಿತಿಗೆ ಶ್ರಮಿಸಿ ಮೊದಲ ನೋಬಲ್ ಪ್ರಶಸ್ತಿ ಪಡೆದವರು. ಅವರ ಅಪ್ರತಿಮ ಸಾಧನೆಯನ್ನು ಇಡೀ ಜಗತ್ತು ಇಂದು ಸ್ಮರಿಸುತ್ತಿದೆ. ಅವರ ಸಂಶೋಧನೆ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಯುವ ಜನಾಂಗ ಒತ್ತು ನೀಡಿ ಅಧ್ಯಯನ ನಡೆಸಬೇಕಿದೆ ಎಂದರು.
ವಿದ್ಯಾರ್ಥಿ ಸಮೂಹ ಜೀವ ವಿಜ್ಞಾನ ವಿಷಯಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಪ್ರಾಚೀನ ವಿಜ್ಞಾನದ ಮೂಲ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕಿದೆ. ಸಾಕಷ್ಟು ಪಾರಂಪರಿಕ ಜ್ಞಾನ ಪದ್ಧತಿಗಳಿಂದ ಮನುಷ್ಯನ ಜ್ಞಾನ ಹೆಚ್ಚುತ್ತಿದೆ. ಪ್ರಾಚೀನ ವೇದ ಹಾಗೂ ಆಯುರ್ವೇದ ಪದ್ಧತಿಗಳಿಂದ ಮನುಷ್ಯನ ಜೀವ ರಕ್ಷಣೆ, ಆರೋಗ್ಯ ಸುಧಾರಣೆ ಮತ್ತು ಪರಿಸರ ರಕ್ಷಣೆ ಸಾಧ್ಯವಾಗಿದೆ. ಅದನ್ನು ಖಚಿತಪಡಿಸಲು ವೇದಶಾಸ್ತ್ರ ಹಾಗೂ ಪುರಾಣ ಕಾಲದ ದಾಖಲೆಗಳಿಂದ ಸಂಶೋಧನೆಯಲ್ಲಿ ಹಲವಾರು ಸತ್ಯ ಸಂಗತಿಗಳನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಹೊಸ ಶಿಕ್ಷಣ ನೀತಿಯಲ್ಲಿ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಯುವ ಸಮೂಹಕ್ಕೆ ದೊರೆಯುತ್ತಿದೆ. ವಿಜ್ಞಾನದ ವಿದ್ಯಾರ್ಥಿಗಳು ಕಲಾ ವಿಷಯಗಳನ್ನು ಕಲಾ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಆದ್ಯತೆಯಾಗಿ ಅಧ್ಯಯನ ನಡೆಸಬಹುದಾಗಿದೆ. ಬಹುಶಿಸ್ತೀಯ ಆಸಕ್ತಿ ಮತ್ತು ಸಂಶೋಧನಾತ್ಮಕ ದೃಷ್ಠಿಯಲ್ಲಿ ಆಲೋಚಿಸಿ ಹೊಸ ವಾಸ್ತವಿಕತೆಯನ್ನು ಅರಿತು ಸಾಧನೆಯತ್ತ ಮುನ್ನಡೆಯಬೇಕಿದೆ. ಮನುಷ್ಯನ ಯೋಗಕ್ಷೇಮವೇ ವಿಜ್ಞಾನದ ಮೂಲ ಗುರಿಯಾಗಿದೆ ಎಂದು ಹೇಳಿದರು.
ಕುಲಸಚಿವ ಡಾ. ಬಿ. ಶರಣಪ್ಪ ಉಪಸ್ಥಿತರಿದ್ದರು. ರಾಷ್ಟ್ರಿಯ ವಿಜ್ಞಾನ ದಿನ ಆಚರಣೆಯ ಸಂಯೋಜಕ ಪ್ರೊ. ಟಿ. ಶಂಕರಪ್ಪ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ. ಕೆ. ಲಿಂಗಪ್ಪ ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಲಕ್ಷ್ಮಿ ಶಂಕರ್ ಜೋಷಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಭೌತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುಲೋಚನಾ ನಿರೂಪಿಸಿದರು.